ಹಾವೇರಿ : ಬಿಜೆಪಿಯ ಎಸ್ ಟಿ ಸಮಾವೇಶದಲ್ಲಿ ರೊಚ್ಚಿಗೆದ್ದ ಮಹಿಳಾಮಣಿಗಳು, ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಭಾಷಣದ ಮಧ್ಯೆಯೇ ಗ್ಯಾಸ್,ಸಿಲಿಂಡರ್ ದುಬಾರಿಯಾಗಿದ್ದಕ್ಕೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

ಪಕ್ಷದ ಮಹಿಳಾ ಕಾರ್ಯಕರ್ತೆಯೇ ನಳೀನ್ ಕುಮಾರ್ ಕಟೀಲ್ ಅವರನ್ನು ತರಾಟೆಗೆ ತೆಗೆದುಕೊಂಡರು. ಸಿಲಿಂಡರ್ ಗೆ ₹1300 ರೂಪಾಯಿ ರೊಕ್ಕ ಮಾಡಿರಿ, ಬಡವರು ಎಲ್ಲಿ ಹೋಗಬೇಕು, ಯಾಕೆ ₹1500 ರೂಪಾಯಿ ಮಾಡಿಬಿಡ್ರಿ ಸರಿ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯಿಂದ ವೇದಿಕೆ ಮೇಲಿದ್ದ ಬಿಜೆಪಿ ನಾಯಕರು ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಮಹಿಳೆಯರ ಉಗ್ರ ಕೋಪವನ್ನು ಎಷ್ಟೇ ತಣಿಸಿದರೂ, ಗ್ಯಾಸ್ ಬೆಲೆ ಏರಿಕೆಯ ಬಿಸಿ ಮಾತ್ರ ತಣ್ಣಗಾಗಿರಲಿಲ್ಲ.
ಬ್ಯಾಡಗಿಯಲ್ಲಿ ನಡೆದ ಎಸ್ ಟಿ ಸಮಾವೇಶದ ಮಧ್ಯೆಯೇ ಬಸಮ್ಮ ಕಮ್ಥರ್ ಎಂಬ ಮಹಿಳೆ ರಾಜ್ಯಾಧ್ಯಕ್ಷ ಕಟೀಲ್ ಅವರು ಮತ್ತು ಪಕ್ಷದ ವಿರುದ್ಧ ಕೂಗಾಡಿದ್ದಾರೆ. ಸಿಲಿಂಡರ್ ದುಬಾರಿ ಮಾಡಿ ಮತ್ತೆ ಕುಕ್ಕರಲ್ಲೇ ಅಡುಗೆ ಮಾಡಿಕೊಂಡು ತಿನ್ನಿ ಅಂತಾರೆ, ನಿಮಗೆ ದುಡ್ಡಿದೆ ನಿಮ್ಮ ಮನೆಯ ಹೆಣ್ಮಕ್ಕಳು, ಹೆಂಡ್ರು ಮಾಡಿ ಹಾಕ್ತಾರೆ, ನಾವು ಎಲ್ಲೆಂದ ರೊಕ್ಕ ತರೋಣಾ ಎಂದು ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಡೈರಕ್ಟ್ ಬೊಮ್ಮಾಯಿವರಿಗೆ ಹೇಳ್ತೇನಿ ತಡ್ರಿ, ನಾವೆಲ್ಲಾ ಹೆಣ್ಮಕ್ಕಳು ರೈತರ ಮಕ್ಕಳು ಎಂದು ಸಿಡಿಮಿಡಿಗೊಂಡರು. ಮಹಿಳೆಯನ್ನು ಸಮಾಧಾನ ಮಾಡಿದರೂ ಮತ್ತೆ ಎದ್ದು ನಿಂತು ಹರಿಹಾಯ್ದರು. ಸದ್ಯ ಇದು ಪ್ರತಿಪಕ್ಷದವರ ತಂತ್ರಗಾರಿಕೆ ಎಂದು ಬಿಜೆಪಿ ಮುಖಂಡರು ಇದುವರೆಗೂ ಹೇಳದೇ ಇರುವುದು ಮಾತ್ರ ಕಾಕತಾಳೀಯವಾಗಿದೆ.




