ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ 2-1ರ ಅಂತರದಿಂದ ಗೆಲುವು ಸಾಧಿಸಿರುವ ಟೀಂ ಇಂಡಿಯಾ, ಮುಂದಿನ ಜೂನ್ 7ರಂದು ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಆಸೀಸ್ ತಂಡವನ್ನ ಎದುರಿಸಲಿದೆ.

ತವರಿನಲ್ಲಿ ನಡೆದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಪ್ರವಾಸಿ ಆಸ್ಟ್ರೇಲಿಯಾ ತಂಡದ ವಿರುದ್ಧ ಪ್ರಾಬಲ್ಯ ಸಾಧಿಸಿದೆ. ಆದರೆ ಇಂಗ್ಲೆಂಡ್ ನೆಲದಲ್ಲಿ ನಡೆಯುವ ಫೈನಲ್‌ನಲ್ಲಿ ಆಸೀಸ್ ಸವಾಲು ಎದುರಿಸುವುದು ಸುಲಭದ ಸಂಗತಿಯಲ್ಲ. ವಿಶೇಷವಾಗಿ ತವರಿನಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿ ಬಳಿಕ ಭಾರತೀಯ ಆಟಗಾರರು ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

ಹೀಗಾಗಿ ಚುಟುಕು ಕ್ರಿಕೆಟ್ ಬಳಿಕ ಟೆಸ್ಟ್ ಕ್ರಿಕೆಟ್ ಆಡುವುದು ಯಾವುದೇ ಆಟಗಾರರಿಗೂ ಸಲಭವಲ್ಲ. ಮಾರ್ಚ್ 31ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿ ಮೇ 28ಕ್ಕೆ ಅಂತ್ಯಗೊಳ್ಳಲಿದೆ. ಇದರ ಬೆನ್ನಲ್ಲೇ ಜೂನ್ 7ರಿಂದ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಆರಂಭವಾಗಲಿದೆ. ಇದು ಟೀಂ ಇಂಡಿಯಾ ಆಟಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ. ಐಪಿಎಲ್ ಮುಗಿದ ಬೆನ್ನಲ್ಲೇ ಇಂಗ್ಲೆಂಡ್‌ಗೆ ತೆರಳಲಿರುವ ಭಾರತ ತಂಡದ ಆಟಗಾರರು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಜೊತೆಗೆ ಅಲ್ಲಿನ ಪಿಚ್‌ನಲ್ಲಿ ಆಸೀಸ್ ಸವಾಲು ಯಾವ ರೀತಿ ಎದುರಿಸಬೇಕೆಂಬ ನಿಟ್ಟಿನಲ್ಲಿ ಸಾಕಷ್ಟು ತಯಾರಿ ಮಾಡಬೇಕಿದೆ.
ಈ ನಡುವೆ ಟೀಂ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಸಹ ಐಪಿಎಲ್ ಮುಗಿದ ಬೆನ್ನಲ್ಲೇ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಆಡುವುದು ಸವಾಲಿನ ಸಂಗತಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಫೈನಲ್ ಮುಗಿದ ಒಂದೇ ವಾರದ ಅಂತರದಲ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಆಡುವುದು ಸವಾಲಿನ ಸಂಗತಿಯಾಗಿದ್ದು, ಈ ಬಗ್ಗೆ ಹೆಚ್ಚಿನ ನಿಗಾವಹಿಸುತ್ತೇವೆ ಎಂದು ದ್ರಾವಿಡ್ ಹೇಳಿದ್ದಾರೆ.