Kantara On International Stage: ವಿಶ್ವಸಂಸ್ಥೆಯ ಮೆಟ್ಟಿಲೇರಿದ ಕನ್ನಡದ ಕಾಂತಾರ ಸಿನಿಮಾ: ನಾಳೆ ಸ್ವಿಜರ್ಲ್ಯಾಂಡ್ ನಲ್ಲಿ ಕಾಂತಾರ ಪ್ರದರ್ಶನ

ಕನ್ನಡ ಮಾತ್ರವಲ್ಲದೆ, ಇಡೀ ಭಾರತೀಯ ಚಿತ್ರರಂಗದಲ್ಲಿ‘ಕಾಂತಾರ’ ಸಿನಿಮಾ ಮಾಡಿರುವ ಮೋಡಿ ಬಹಳ ದೊಡ್ಡದು. ದಕ್ಷಿಣ ಕನ್ನಡದ ಕರಾವಳಿ ಭಾಗದ ದೈವದ ಕಥೆ ಹೊತ್ತು ತಂದ ಸಿನಿಮಾವನ್ನು ದೇಶದೆಲ್ಲೆಡೆಯ ಜನರು ಮೆಚ್ಚಿಕೊಂಡರು. ದೈವ ಮತ್ತು ಸ್ಥಳೀಯ ಸಂಸ್ಕೃತಿ ಬಿಂಬಿಸುವ ಕಥೆಯಿರುವ ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆ ಆಗಿತ್ತು. ಇದೀಗ ಕಾಂತಾರ ಸಿನಿಮಾ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ವಿಶ್ವಸಂಸ್ಥೆಯಲ್ಲಿ ಕಾಡಿನ ಜನರ ಬಗ್ಗೆ ಮಾತನಾಡಲಿದ್ದಾರೆ.

ಕನ್ನಡದಲ್ಲಿ ಬಂದ ಕಾಂತಾರ ಸಿನಿಮಾ ದೇಶದ ಸಿನಿಮಾ ರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತು. ಬಾಲಿವುಡ್ ಹಾಗೂ ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಅನೇಕ ಭಾಷೆಗಳಲ್ಲಿ ಸಿನಿಮಾ ಅನ್ನು ಬಿಡುಗಡೆ ಮಾಡಲಾಯಿತು. ಕಾಂತಾರ ಬಾಕ್ಸಾಪೀಸ್ ನಲ್ಲಿ ದೂಳೆಬ್ಬಿಸಿದ ನಡುವೆ ಅನೇಕ ಪ್ರಶಸ್ತಿಗಳನ್ನು ಸಹ ಪಡೆಯಿತು. ಇದೀಗ ಸಿನಿಮಾ ಮಾಡಿದ ಮೇಲೆ ಇದರ ಎರಡನೇ ಪಾರ್ಟ್ ಸಹ ಮಾಡಲು ಚಿತ್ರತಂಡ ಯೋಚಿಸುತ್ತಿರುವ ಸಂದರ್ಭದಲ್ಲಿ ವಿಶ್ವಸಂಸ್ಥೆಯಲ್ಲಿ ಕಾಡಿನಲ್ಲಿ ವಾಸಿಸುವ ಆದಿವಾಸಿ ಜನರ, ಅವರ ಸಂಪ್ರದಾಯಗಳ ಬಗ್ಗೆ ಇಂದು ಮಾತನಾಡಲಿದ್ದಾರೆ.

ವಿಶ್ವದ ಅನೇಕ ಸಮಸ್ಯೆಗಳ ಕುರಿತು ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಸುದೀರ್ಘವಾದ ಚರ್ಚೆಗಳು ನಡೆಯುತ್ತಿವೆ. ಈ ಸಭೆಯಲ್ಲಿ ವಿಶ್ವದ ಅನೇಕ ದೇಶಗಳ ನಾಯಕರು, ಪ್ರತಿನಿಧಿಗಳು ಭಾಗವಹಿಸಿ ತಮ್ಮ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಇಲ್ಲಿ ವಿಶ್ವದ ಅನೇಕ ಸಮಸ್ಯೆಗಳು ಮತ್ತು ಪರಿಹಾರಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದೇ ಸಂದರ್ಭದಲ್ಲಿ ಕಾಂತಾರ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಪಾಲ್ಗೊಂಡು ಕನ್ನಡನಾಡಿನ ಸಂಸ್ಕೃತಿ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಚರ್ಚೆ ಮಾಡಲಿದ್ದಾರೆ. ಅವರು ಕನ್ನಡದಲ್ಲಿಯೇ ಮಾತನಾಡಲಿದ್ದಾರೆ ಎನ್ನಲಾಗಿದೆ.

ಕಾಂತಾರ ಸಿನಿಮಾವನ್ನೇ ಆಧಾರವಾಗಿಟ್ಟುಕೊಂಡು, ಕರ್ನಾಟಕ ಸಂಸ್ಕೃತಿ, ದೈವಾರಾಧನೆ, ಕಾಡಿನ ಜನರ ಬದುಕು ನಾಡಿನ ಭವ್ಯ ಸಂಸ್ಕೃತಿಯ ಕುರಿತು ಮಾತನಾಡಲಿದ್ದಾರೆ ಎನ್ನಲಾಗಿದೆ. ಜೊತೆಗೆ ಭಾರತೀಯ ಸಿನಿಮಾ ರಂಗ ಬೆಳೆದು ಬಂದ ಬಗೆಯನ್ನೂ ವಿವರಿಸಲಿದ್ದಾರಂತೆ. ವಿಶ್ವಸಂಸ್ಥೆಯ ವೇದಿಕೆಯ ಮೇಲೆ ಭಾರತೀಯ ಸಂಸ್ಕೃತಿಯ ಅನಾವರಣ ರಿಷಬ್ ಮೂಲಕ ಆಗುತ್ತಿದೆ.

ಸಿನಿಮಾ‌ ಪ್ರದರ್ಶನ : ವಿಶ್ವಸಂಸ್ಥೆ ಗೆ ಭೇಟಿ ನೀಡಿದ ಸಂದರ್ಭದಲ್ಲಿಯೇ ಕಾಂತಾರ ಸಿನಿಮಾದ ಪ್ರದರ್ಶನಕ್ಕೆ ವಿಶ್ವಸಂಸ್ಥೆ ಸಿದ್ಧತೆ ಮಾಡಿಕೊಂಡಿದೆ. ಮಾರ್ಚ್ 17 ರಂದು ಸ್ವಿಝರ್ ಲ್ಯಾಂಡ್ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್ ನಲ್ಲಿ ಸಿನಿಮಾ ಪ್ರದರ್ಶನಗೊಳ್ಳುತ್ತಿರುವುದಾಗಿ ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ ಸೇನ್ ಗುಪ್ತ ತಿಳಿಸಿದ್ದಾರೆ.

More News