ಗಂಡನ ಮನೆಯಲ್ಲಿ ಇರಲು ಆಗುತ್ತಿಲ್ಲ. ತುಂಬಾ ನೋವಾಗುತ್ತಿದೆ. ಜೀವನ ಸಾಗಿಸಲು ಆಗುತ್ತಿಲ್ಲ ಎಂದು ಹೆಣ್ಮಗಳೊಬ್ಬಳು ಕಣ್ಣೀರು ಹಾಕಿದರೆ ತಂದೆ ತಾಯಿಯಾಗಿ ಆವರನ್ನು ದಯವಿಟ್ಟು ಸಪೋರ್ಟ್ ಮಾಡಿ ಎಂದು ನಟಿ ಅನುಪ್ರಭಾಕರ್ ಮನವಿ ಮಾಡಿದ್ದಾರೆ.

ನಟಿ ಅನುಪ್ರಭಾಕರ್ ಕೆರಿಯರ್ ಪೀಕ್‌ನಲ್ಲಿರುವಾಗಲೇ ಹಿರಿಯ ನಟಿ ಜಯಂತಿಯವರ ಪುತ್ರನ ಜೊತೆ ಹಸೆಮಣೆ ಏರಿದ್ದರು. ಬಳಿಕ ಮನಸ್ಥಾಪ ಉಂಟಾದ ಕಾರಣ 12 ವರ್ಷಗಳ ದಾಂಪತ್ಯಕ್ಕೆ ಡಿವೋರ್ಸ್ ಪಡೆಯುವ ಮೂಲಕ ಅಂತ್ಯವಾಡಿದರು. ನಂತರ 2016 ರಲ್ಲಿ ನಟ ರಘು ಮುಖರ್ಜಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಈಗ ದಂಪತಿಗೆ ನಂದನಾ ಎಂಬ ಮಗಳಿದ್ದಾಳೆ. ಖಾಸಗಿ ಚಾನಲ್ ನಲ್ಲಿ ತಮ್ಮ ಮೊದಲ ವಿವಾಹದ ಕುರಿತು ಮಾತನಾಡಿದ ನಟಿ, ನನ್ನ ಬದುಕಿನಲ್ಲೂ ಅಂಥ ಘಟನೆಯೊಂದು ನಡೆಯಿತು. ಆಗ ನಂಗೆ ತಂದೆ ಇರಲಿಲ್ಲ. ಆದರೆ ನನ್ನ ತಾಯಿ, ಅಣ್ಣ ಮತ್ತು ಸ್ಕೂಲ್ ಫ್ರೆಂಡ್ಸ್ ನನ್ನ ಪರ ನಿಂತರು. ಈ ರೀತಿ ಘಟನೆ ಹೆಣ್ಣು ಮಕ್ಕಳ ಜೀವನದಲ್ಲಿ ನಡೆದರೆ, ಕುಗ್ಗುತ್ತಾರೆ. ಫ್ಯಾಮಿಲಿ ಸಪೋರ್ಟ್ ಇದ್ದಿದ್ದರಿಂದಲೇ ನನಗೆ ಮತ್ತೊಂದು ಲೈಫ್ ಕ್ರಿಯೇಟ್ ಮಾಡಿಕೊಳ್ಳಲು ಸಾಧ್ಯವಾಯ್ತು ಎಂದು ತಮ್ಮ ನೋವನ್ನು ಹಂಚಿಕೊಂಡರು.

ಮನುಷ್ಯನಿಗೆ ಇರೋದು ಒಂದೇ ಜೀವನ. ಆ ಜೀವನವನ್ನು ಸಂತೋಷದಿಂದ ಬಾಳಬೇಕು. ಖುಷಿಯಾಗಿ ಬದುಕಬೇಕು. ನೋವಿನಲ್ಲಿಯೇ ಜೀವನ ಸಾಗಿಸುವಂತೆ ಆಗಬಾರದು. ನಾವಿಬ್ಬರೂ ಒಟ್ಟಿಗೆ ಇರಲು ಆಗುವುದಿಲ್ಲ. ಸಂತೋಷ ಅಸಾಧ್ಯವೆಂದೆನಿಸಿದಾಗ ನೋವು ಕೊಡುವ ನಿರ್ಧಾರಗಳಾದರೂ ಸರಿ, ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳುವ ಮೂಲಕ ಮೊದಲ ವಿವಾಹ ಮುರಿದು ಬಿದ್ದದ್ದೇಕೆ ಎಂದು ತಿಳಿಸಿದರು.
ಮುಂದುವರೆದು ಹೆಣ್ಮಕ್ಕಳ ತಂದೆ ತಾಯಿಯನ್ನು ಮನವಿ ಮಾಡಿದ ಅವರು, ನಿಮ್ಮ ಮನೆ ಹೆಣ್ಣು ಮಕ್ಕಳು ಕಣ್ಣೀರು ಹಾಕಿಕೊಂಡು, ಗಂಡನ ಮನೆಯಲ್ಲಿ ನೋವಾಗುತ್ತಿದೆ. ಜೀವನ ಸಾಗಿಸಲು ಆಗುತ್ತಿಲ್ಲ ಎಂದರೆ, ತಂದೆ ತಾಯಿಯಾಗಿ ಆವರನ್ನು ದಯವಿಟ್ಟು ಸಪೋರ್ಟ್ ಮಾಡಿ ಎಂದು ಮನವಿ ಮಾಡಿದರು.
ಸಮಾಜದಲ್ಲಿ ಯಾರೂ ಯಾರನ್ನೂ ಸಪೋರ್ಟ್ ಮಾಡಲ್ಲ. ಕೊನೆಗೆ ನಮ್ಮ ಪರ ನಿಲ್ಲುವುದು ತಂದೆ- ತಾಯಿ ಮಾತ್ರ. ಡಿವೋರ್ಸ್ ಪರಿಹಾರ ಎಂದು ನಾನು ಹೇಳುವುದಿಲ್ಲ. ಸರಿ ಮಾಡಿಕೊಳ್ಳಿ, ಆದರೆ ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡುತ್ತಾರೆ. ಅಲ್ಲಿ ವರದಕ್ಷಿಣಿಗಾಗಿ ಅವಳ ಪ್ರಾಣ ತೆಗೆದರೆ, ನೀವು ಆಮೇಲೆ ಮಾತನಾಡಿ ಏನು ಉಪಯೋಗ ಎಂದು ಸಲಹೆ ನೀಡಿದರು.




