ಮೋಹನ್ ಲಿಂಬಿಕಾಯಿಗೆ ತಟ್ಟಿದ ಕೈ ಬಿಸಿ: ಚುನಾವಣೆ ಮುನ್ನವೇ ವ್ಯಕ್ತವಾದ ಮೂಲ ಕಾಂಗ್ರೆಸ್ಸಿಗರ ವಿರೋಧ..!

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಫೈಟ್ ಜೋರಾಗಿದೆ. ಮೋಹನ್ ಲಿಂಬಿಕಾಯಿಗೆ ಕಾಂಗ್ರೆಸ್ಸಿಗರ ವಿರೋಧದ ಬಿಸಿ ತಟ್ಟುವ ಸಾಧ್ಯತೆ ಹೆಚ್ಚಾಗಿದೆ. ‌ ಮೋಹನ್ ಲಿಂಬಿಕಾಯಿ ಸ್ಪರ್ಧೆಗೆ ಮೂಲ ಕಾಂಗ್ರೆಸ್ಸಿಗರ ವಿರೋಧ ವ್ಯಕ್ತವಾಗಿದ್ದು, ಜಿಲ್ಲಾ ಕಮಿಟಿ ಜತೆ ಚರ್ಚಿಸದೆ ಮೋಹನ್ ಲಿಂಬಿಕಾಯಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಮಾತನಾಡಿದ ಅವರು, ಲಿಂಬಿಕಾಯಿ ಕಾಂಗ್ರೆಸ್ ಸೇರ್ಪಡೆಗಿಂತ ಮುಂಚೆಯೇ ನಮ್ಮೊಂದಿಗೆ ಮಾತುಕತೆ ನಡೆಸಿಲ್ಲ. ಅವರು ಯಾವುದೇ ಷರತ್ತು ಇಲ್ಲದೆ ಬಂದಿದ್ದಾರೆ.‌ ಅರವಿಂದ ಬೆಲ್ಲದ್‌ರನ್ನು ಸೋಲಿಸಲು ಉತ್ತಮ ಅಭ್ಯರ್ಥಿ ಕೊಡಿ ಎಂದು ಅಲ್ಲಿನ ಮತದಾರರು, ಕಾರ್ಯಕರ್ತರು ಕೇಳುತ್ತಿದ್ದಾರೆ. ಮೂಲ‌ ಕಾಂಗ್ರೆಸ್‌ನವರಿಗೆ ಟಿಕೆಟ್ ಕೊಡಿ‌ ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರು, ರಾಜ್ಯ ಸಚಿವರಿದ್ದರೂ ಪ್ರಯೋಜನವಾಗಿಲ್ಲ. ಅಭಿವೃದ್ಧಿ ಬದಲು, ಜಾತಿ ಮತ್ತು ಧರ್ಮಾಧಾರಿತ ರಾಜಕಾರಣವೇ ಇವರಿಗೆ ಮುಖ್ಯವಾಗಿದೆ. ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವಾಗುತ್ತಿದೆ ಎಂದು ಕಿಡಿಕಾರಿದರು.
ಹಬ್ಬದ ಹೆಸರಿನಲ್ಲಿ ಹಲಾಲ್‌ ಮಾಂಸ ವಿರೋಧ ಮಾಡುವ ಬಿಜೆಪಿಯವರೇ, ಅದನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ದಾರೆ. ಚುನಾವಣೆಗಾಗಿ ಈದ್ಗಾ ಮೈದಾನದಲ್ಲಿ ಗಣಪತಿ ಪ್ರತಿಷ್ಠಾಪಿಸಿದರು. ದರ್ಗಾ ತೆರವು, ಮೈದಾನದ ಹೆಸರು ಬದಲಾವಣೆಯಂತಹ ಕೆಲಸಗಳಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
ಎಐಎಮ್‌ಐಎಮ್ ಬಿಜೆಪಿಯ ಬಿ ಟೀಮ. ಕೋಮು ರಾಜಕೀಯದ ಆಟ ಹೆಚ್ಚು ದಿನ‌ ನಡೆಯಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

More News