ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕೆ ಮಾಡಿದ ಕಾರಣದಿಂದಾಗಿ ಕಾಂಗ್ರೆಸ್ ಪಕ್ಷದ ನಾಯಕ, ಯುವ ನೇತಾರ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೋಲಾರದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಮೋದಿ ಉಪನಾಮಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ನೀಡಿದ ದೂರಿನ ಅನ್ವಯ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಈ ದೂರನ್ನು ವಿಚಾರಣೆ ನಡೆಸಿದ ಗುಜರಾತ್‌ನ ಸೂರತ್ ನ್ಯಾಯಾಲಯವು ಮಹತ್ವದ ತೀರ್ಪು ನೀಡಿ, ರಾಹುಲ್ ಗಾಂಧಿ ದೋಷಿ ಎಂದು ಪ್ರಕಟಿಸಿದೆ.
ಲೋಕಸಭಾ ಚುನಾವಣೆ ಶುರುವಾದಗಿನಿಂದಲೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿರುವ ರಾಹುಲ್ ಗಾಂಧಿ, ದೇಶವನ್ನು ನಾಶದ ಕಡೆಗೆ ಕೊಂಡೊಯ್ಯುತ್ತಿದ್ದಾರೆ ಎಂದು ಅಪಾದಿಸುತ್ತಲೇ ಬಂದಿದ್ದಾರೆ. ಇದೇ ತರಹ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೋಲಾರದಲ್ಲಿ ಮಾತನಾಡುವ ವೇಳೆ ನಿರವ್ ಮೋದಿ , ಲಲಿತ್ ಮೋದಿ, ನರೇಂದ್ರ ಮೋದಿ ಇವೆರೆಲ್ಲರ ಸರ್‌ನೇಮ್ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ. ಎಲ್ಲಾ ಕಳ್ಳರು ಮೋದಿಯನ್ನು ಸಾಮಾನ್ಯ ಉಪನಾಮವನ್ನಾಗಿ ಮಾಡಿಕೊಂಡಿರುವುದು ಹೇಗೆ? ಎಂದು ಹೇಳಿದ್ದರು.

ಈ ಪ್ರಕರಣವನ್ನಿಟ್ಟುಕೊಂಡು ಅರ್ಜಿದಾರರ ಪರವಾದ ವಕೀಲರು ಮೋದಿ ಎಂದು ಉಪನಾಮ ಇಟ್ಟುಕೊಂಡಂತಹ ಎಲ್ಲರನ್ನೂ ನಿಂದಿಸಿದ್ದಾರೆ ಎಂದು ಕೋರ್ಟ್ ಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಕಳೆದ ವಾರ ಎರಡೂ ಕಡೆಯ ಅಂತಿಮ ವಾದಗಳನ್ನು ಆಲಿಸಿದೆ. ನಾಲ್ಕು ವರ್ಷಗಳ ಕಾಲ ಸೂರತ್ ನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಚ್ ಎಚ್ ವರ್ಮಾ ಅವರು ವಿಚಾರಣೆಯನ್ನು ನಡೆಸಿದರು. ರಾಹುಲ್ ಗಾಂಧಿ ಅವರು ಅಕ್ಟೋಬರ್ 2021 ರಲ್ಲಿ ತಮ್ಮ ಕೊನೆಯ ಹೇಳಿಕೆಯನ್ನು ಸೂರತ್ ನ್ಯಾಯಾಲಯದಲ್ಲಿ ದಾಖಲಿಸಿದ್ದರು. ಅವರ ಮೇಲೆ ಐಪಿಸಿ ಸೆಕ್ಷನ್ 499, 500 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಹುಲ್ ಗೆ ಬೇಲ್ : ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ತೀರ್ಪಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಸಮಯಕ್ಕೆ ಮೊದಲೇ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಸೂರತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ದೋಷಿ ಎಂದು ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ಪ್ರಕಟಿಸಿತು. ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದ ಕೂಡಲೇ ರಾಹುಲ್ ಪರ ವಕೀಲರು ಜಾಮೀನಗೆ ಅರ್ಜಿ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಿದ ಸೂರತ್ ಮ್ಯಾಜಿಸ್ಟ್ರೇಟ್ 30 ದಿನಗಳ ಜಾಮೀನು ಮಂಜೂರು ಮಾಡಿದ್ದು ರಾಹುಲ್ ಗೆ ನೆಮ್ಮದಿಯನ್ನು ತಂದಿಟ್ಟಿದೆ.




