ನವದೆಹಲಿ: ‘ಮೋದಿ ಉಪನಾಮ’ ಬಳಸಿ ಟ್ವೀಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ, ಕೇರಳದ ವೈನಾಡು ಸಂಸದ ರಾಹುಲ್ ಗಾಂಧಿ ಅವರನ್ನು ಮಾನನಷ್ಟ ಮೊಕದ್ದಮೆಯಲ್ಲಿ ದೋಷಿ ಎಂದು ಘೋಷಿಸಿದ ದಿನಾಂಕದಿಂದ ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.
ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಅಷ್ಟೇ ಗುಜರಾತ್ ನ ಸೆಷನ್ಸ್ ನ್ಯಾಯಾಲಯ ಸಂಸದ ರಾಹುಲ್ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಕೋರ್ಟ್ ಶಿಕ್ಷೆ ವಿಧಿಸಿದ 24 ಗಂಟೆ ಒಳಗಡೆ ಪ್ರಜಾಪ್ರತಿನಿಧಿ ಕಾಯ್ದೆ ಅಡಿಯಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಅನರ್ಹ ಗೊಳಿಸಿ ಆದೇಶಿಸಿದ್ದಾರೆ.

2 ವರ್ಷ ಅಥವಾ 2 ವರ್ಷಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದರೆ ಅವರ ವಿರುದ್ಧ ಅನರ್ಹತೆ ಅಸ್ತ್ರ ಪ್ರಯೋಗಿಸುವ ಅವಕಾಶ ಇದೆ. ಹೀಗಾಗಿಯೇ 1951ರ ಜನಪ್ರತಿನಿಧಿಗಳ ಕಾಯಿದೆಯ ಸೆಕ್ಷನ್ 8(3)ರ ಅಡಿಯಲ್ಲಿ ರಾಹುಲ್ ಗಾಂಧಿ ಲೋಕಸಭಾ ಸ್ಥಾನದಿಂದ ಅನರ್ಹರಾಗಿದ್ದಾರೆ.
ಜನಪ್ರತಿನಿಧಿ ಕಾಯ್ದೆ ಹೇಳೋದೇನು..?
ಜನಪ್ರತಿನಿಧಿಗಳ ಕಾಯ್ದೆಯಂತೆ ಸಂಸದರು ಎರಡು ನಿದರ್ಶನಗಳಲ್ಲಿ ಅನರ್ಹರಾಗಬಹುದು. ಅವುಗಳೆಂದರೆ..
1) ಸೆಕ್ಷನ್ 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧ ಮತ್ತು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಅಥವಾ ಸೆಕ್ಷನ್ 171E (ಲಂಚ ತೆಗೆದುಕೊಳ್ಳುವುದು)ನಂತಹ ಪ್ರಕರಣ ಅಥವಾ ಸೆಕ್ಷನ್ 171F (ಚುನಾವಣೆಯಲ್ಲಿ ಅನಗತ್ಯ ಪ್ರಭಾವದ) ಅಪರಾಧ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತು ಆದರೆ.
2) ಶಾಸಕರು ಅಥವಾ ಸಂಸದರು ಯಾವುದೇ ಇತರ ಅಪರಾಧ ಪ್ರಕರಣಗಳಲ್ಲಿ ಎರಡು ವರ್ಷ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾಗಿದ್ದಾರೆ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು. ಇದೇ ನಿಯಮದ ಪ್ರಕಾರ ರಾಹುಲ್ ಗಾಂಧಿ ಲೋಕಸಭಾ ಸ್ಥಾನದಿಂದ ಅನರ್ಹರಾಗಲು ಕಾರಣವಾಗಿದೆ.

ಇತ್ತ ರಾಹುಲ್ ಗಾಂಧಿ ಬಳಿಯೂ ಕಾನೂನು ಹೋರಾಟ ನಡೆಸುವ ಆಯ್ಕೆಗಳಿವೆ. ಗುಜರಾತ್ ತೀರ್ಪಿನ ವಿರುದ್ಧ ಹೈ ಕೋರ್ಟ್ ಗೆ ಮೊರೆ ಹೋಗುವ ಸಾಧ್ಯತೆ ಇವೆ. 2 ವರ್ಷ ಜೈಲು ಶಿಕ್ಷೆ ರದ್ದು ಮಾಡಬೇಕು. ಲೋಕಸಭಾ ಸ್ಥಾನಕ್ಕೆ ಅವಕಾಶ ನೀಡಬೇಕೆಂಬ ಮನವಿ ಮಾಡಬಹುದು. ಇತ್ತ ಕಾಂಗ್ರೆಸ್ ಪಕ್ಷ ಸಹ ರಾಜಕೀಯ ವಾಗಿ ಹೋರಾಡಲು ಸಿದ್ದತೆ ನಡೆಸಿದೆ.




