ಬೆಂಗಳೂರು: ಕರುನಾಡಿನ ಹೆಸರಾಂತ ನಟ, ರೆಬಲ್ ಸ್ಟಾರ್ ಅಂಬರೀಶ್ ಅವರ ಸ್ಮಾರಕ ಸಿಲಿಕಾನ್ ಸಿಟಿಯ ಕಂಠೀರವ ಸ್ಟುಡಿಯೋ ನಿರ್ಮಾಣಗೊಂಡಿದ್ದು ಇಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ.
ಅಂಬಿ ಅವರ ಸ್ಮಾರಕವು ಭಿನ್ನವಾದ ಶೈಲಿಯಲ್ಲಿ ನಿರ್ಮಾಣವಾಗಿದ್ದು, ಕೈ ಎತ್ತಿ ಮುಗಿಯುವ ಆಕಾರದಲ್ಲಿ ಇದೆ. ಇದು ಎಲ್ಲರ ಸ್ಮಾರಕಗಳಿಗಿಂತ ವಿಶೇಷವಾಗಿದೆ.
ಕಂಠೀರವ ಸ್ಟುಡಿಯೋದ 1 ಎಕರೆ 34 ಗುಂಟೆ ಜಾಗದಲ್ಲಿ ಅಂದಾಜು 12 ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಾಣವಾಗಿದೆ. ಇದರ ನಡುವೆ 32 ಅಡಿ ಎತ್ತರದ ಅಂಬರೀಶ್ ಪ್ರತಿಮೆ ಸಹ ನಿರ್ಮಾಣ ಮಾಡಲಾಗಿದೆ.

ಅಂಬರೀಶ್ ಅವರು ಅಗಲಿದ ನಾಲ್ಕೂವರೆ ವರ್ಷಗಳ ಬಳಿಕ ಸ್ಮಾರಕ ತಲೆ ಎತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವರ್ಷ ಫೆಬ್ರವರಿ 27ರಂದು ಸಮಾಧಿ ಬಳಿ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. ಇದೀಗ ಸುಂದರವಾದ ಸ್ಮಾರಕ ನಿರ್ಮಾಣವಾಗಿದ್ದು, ಇಂದು ಉದ್ಘಾಟನೆಯಾಗಲಿದೆ. ಈ ಸಮಾರಂಭದಲ್ಲಿ ಅನೇಕ ರಾಜಕೀಯ ನಾಯಕರುಗಳು, ಸಿನಿಮಾ ರಂಗದ ಗಣ್ಯರು ಪಾಲ್ಗೊಳ್ಳಲಿದ್ದು, ಅಂಬಿ ಅವರ ಅನೇಕ ಅಭಿಮಾನಿಗಳು ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ರೇಸ್ ಕೋರ್ಸ್ ರಸ್ತೆಗೆ ಅಂಬಿ ಹೆಸರು ನಾಮಕರಣ
ವಿಶೇಷವಾಗಿ ನಿರ್ಮಾಣ ಮಾಡಿರುವ ಸ್ಮಾರಕದ ಬಳಿ ಪ್ರತಿಮೆ ಜೊತೆಗೆ ಮ್ಯೂಸಿಯಂ ಸಹ ನಿರ್ಮಾಣ ಮಾಡಲಾಗಿದೆ. ನೂರಾರು ಎಲ್ ಇ ಡಿ ದೀಪಗಳನ್ನು ಅಳವಡಿಸುವ ಮೂಲಕ ಸ್ಮಾರಕದ ಅಂದವನ್ನು ಹೆಚ್ಚಿಸಲಾಗಿದೆ. ರಾತ್ರಿಯ ಸಮಯದಲ್ಲಿ ದೀಪಗಳು ಕಂಗೊಳಿಸಲಿದ್ದು, ನೋಡುಗರನ್ನು ಆಕರ್ಷಿಸಲಿವೆ. ಇದೇ ಸಂದರ್ಭದಲ್ಲಿ ಅಂಬರೀಶ್ ನೆನಪಿನಾರ್ಥವಾಗಿ ನಗರದ ರೇಸ್ ಕೋರ್ಸ್ ರಸ್ತೆಗೆ ಅಂಬಿ ಹೆಸರನ್ನು ನಾಮಕರಣ ಮಾಡಲಾಗುತ್ತಿದೆ. ಇಂದೇ ಸಂಜೆ 5.30 ಕ್ಕೆ ರೇಸ್ ಕೋರ್ಸ್ ಸರ್ಕಲ್ ನಲ್ಲಿ ಈ ರಸ್ತೆಗೆ ಡಾ. ಎಂ. ಹೆಚ್ ಅಂಬರೀಶ್ ರಸ್ತೆ ಎಂದು ಹೆಸರಿಡುವ ಕಾರ್ಯಕ್ರಮ ನಡೆಯಲಿದೆ.




