SIDDARAMAIAH BIOPIC: “ಲೀಡರ್ ರಾಮಯ್ಯ” ಆಗಸ್ಟ್‌ನಲ್ಲಿ ತೆರೆಗೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೀವನಾಧಾರಿತ “ಲೀಡರ್ ರಾಮಯ್ಯ” ಚಿತ್ರ ನಿರ್ಮಾಣವಾಗುತ್ತಿದ್ದು, ಆಗಸ್ಟ್ ನಲ್ಲಿ ತೆರೆ ಕಾಣಲಿದೆ.

ಈ ಬಯೋ ಚಿತ್ರವನ್ನು ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಬೆಳ್ಳಿತೆರೆಯಲ್ಲಿ 75 ವರ್ಷದ ಕಾಂಗ್ರೆಸ್ ನಾಯಕನ ಪಾತ್ರದಲ್ಲಿ ಜನಪ್ರಿಯ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಿದ್ದಾರೆ.

ಮಾಜಿ ಸಚಿವ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಸಿದ್ದರಾಮಯ್ಯ ಮತ್ತು ಅವರ ಕೆಲವು ಅಭಿಮಾನಿಗಳ ಬಯೋಪಿಕ್ ಕುರಿತು ಚರ್ಚೆಯಾಗಿತ್ತು. ಆದರೆ, ಈ ಹಿಂದೆ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ತಮ್ಮ ಜೀವನ ಕುರಿತು ಸಿನಿಮಾ ಮಾಡುವ ಬಗ್ಗೆ ನನಗೇನು ಹೆಚ್ಚಿನ ಮಾಹಿತಿ ಇಲ್ಲ ಎಂದಿದ್ದರು. ಅಲ್ಲದೆ ನಟ ವಿಜಯ್ ಸೇತುಪತಿ ಸಹ ನಟಿಸಲು ಒಪ್ಪಿಗೆ ಕೊಟ್ಟಿರಲಿಲ್ಲ.
ಆದರೆ, ಮಾಜಿ ಶಾಸಕ ಶಿವರಾಜ್ ತಂಗಡಗಿ, ಕ್ಷೇತ್ರದ ಕೆಲವು ಯುವಕರು ಸಿದ್ದರಾಮಯ್ಯ ಅವರ ಜೀವನ ಕಥೆಯನ್ನು ಚಲನಚಿತ್ರವಾಗಿ ತೆರೆ ಮೇಲೆ ತರಲು ಪ್ರಯತ್ನಿಸುತ್ತಿರುವುದನ್ನು  ಖಚಿತಪಡಿಸಿದ್ದರು.
ಲೀಡರ್ ರಾಮಯ್ಯ ಚಿತ್ರವನ್ನು ‘ಎಂಎಸ್ ಕ್ರಿಯೇಷನ್ಸ್’ ಸಂಸ್ಥೆ ನಿರ್ಮಿಸುತ್ತಿದ್ದು, ಸತ್ಯರತ್ನಂ ಅವರ ನಿರ್ದೇಶನವಿದೆ.

ಕುರುಬ ನಾಯಕರಾದ ಸಿದ್ದರಾಮಯ್ಯ, ಅಹಿಂದಗಳಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿದ್ದಾರೆ. ಅವರ ಅಭಿಮಾನಿಗಳು ತಮ್ಮ ನಾಯಕನ ಚಲನಚಿತ್ರವನ್ನು ಬೆಳ್ಳಿತೆರೆ ಮೇಲೆ ನೋಡಲು ಉತ್ಸುಕರಾಗಿ ಕಾಯುತ್ತಿದ್ದಾರೆ.

More News