ಬೆಂಗಳೂರು: ವಿಧಾನಸೌಧಕ್ಕೆ ಆಗಮಿಸಿದ ಶಾಸಕ ಎ.ಟಿ.ರಾಮಸ್ವಾಮಿ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಎ.ಟಿ.ರಾಮಸ್ವಾಮಿ ಬಿಜೆಪಿ ಸೇರ್ಪಡೆಗೊಳ್ಳುವ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಈ ಬಾರಿ ಜೆಡಿಎಸ್ ಅರಕಲಗೂಡಿನಲ್ಲಿ ಎ.ಮಂಜುರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಎ.ಟಿ.ರಾಮಸ್ವಾಮಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇದೀಗ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಮಾತು ಪ್ರಬಲವಾಗಿ ಮಾತುಗಳು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ರಾಜೀನಾಮೆ ಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಅವರು, ನಾನು ಇಂದು ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ಶಾಸಕಾಂಗ ಪಕ್ಷದ ನಾಯಕರ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಸ್ಪೀಕರ್ ಬಂದ ನಂತರ ಅವರನ್ನ ಭೇಟಿ ಆಗುತ್ತೇನೆ ಎಂದು ತಿಳಿಸಿದರು.
ಜೆಡಿಎಸ್‌ನವರು ನನಗೆ ಶಾಸಕನಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಾರೆ. ನಾನೇಂದು ವೈಯಕ್ತಿಕ ಲಾಭಕ್ಕಾಗಿ ಆಡಳಿತ ಮಾಡಿರಲಿಲ್ಲ. ವಿಧಾನಸಭೆ ಒಳಗೆ ಮತ್ತು ಹೊರಗೆ ತಪ್ಪನ್ನು ನೇರವಾಗಿ ಮಾತನಾಡಿದ್ದೇನೆ. ನನ್ನ ವಿರೋಧಿಗಳು ಒಳ್ಳೆಯ ಆಶಯವನ್ನು ಹೊಂದಲಿ. ಎಲ್ಲರಿಗೂ ನನ್ನ ಧನ್ಯವಾದ ತಿಳಿಸುತ್ತೇನೆ. ನನಗೆ ಜನಸೇವೆಗಾಗಿ ಅವಕಾಶ ಸಿಕ್ಕಿತ್ತು. ಮುಂದೆ ಅವಕಾಶ ಸಿಕ್ಕಿದ್ರು ಅದನ್ನ ಜನಸೇವೆಗೆ ಮೀಸಲಿಡುತ್ತೇನೆ. ಕರ್ನಾಟಕ ರಾಜಕಾರಣ ಹಿಂದೆ ಬಹಳ ಚೆನ್ನಾಗಿತ್ತು , ಈಗ ಬಹಳ ಕೆಟ್ಟದಾಗಿದೆ. ಒಲೈಕೆ ರಾಜಕಾರಣ ನಡೆಯುತ್ತಿದೆ ಎಂದರು.

ನಾನು ಹಣದ ಶಕ್ತಿಯ ಮುಂದೆ ಬಲಿಪಶುವಾದೆ:
ನಾನು ಜೆಡಿಎಸ್ ಬಿಟ್ಟಿಲ್ಲ, ಅವರೇ ಹೊರಗೆ ಹಾಕಿದ್ರು. ನಿಮಗೆ ಎಲ್ಲ ಗೊತ್ತಲ್ಲ. ನಾನು ವಿಕ್ಟಿಮ್, ನಾನು ಹಣದ ಶಕ್ತಿಯ ಮುಂದೆ ಬಲಿಪಶು ಆದೆ. ಭ್ರಷ್ಟಾಚಾರವನ್ನು ಎತ್ತಿ ತೋರಿಸಿದಕ್ಕೆ ನನ್ನನ್ನ ವಿಕ್ಟಿಮ್ ಮಾಡಿದ್ರು. ವೈಯಕ್ತಿಕ ಹಿತಾಸಕ್ತಿಗೆ ನಾನು ಕೆಲಸ ಮಾಡಿಲ್ಲ. ಹಾಜರಿಗಾಗಿ ನಾನು ಭಾಗವಹಿಸಿಲ್ಲ, ಸಕ್ರಿಯವಾಗಿ ಭಾಗವಹಿಸಿ ನನ್ನ ಕೆಲಸ ಮಾಡಿದ್ದೇನೆ ಎಂದರು.




