ಐಪಿಎಲ್ 16ನೇ ಆವೃತ್ತಿಗೆ ಭರ್ಜರಿ ಆರಂಭ ದೊರೆತಿದ್ದು, ಚುಟುಕು ಕ್ರಿಕೆಟ್ ಹಬ್ಬದಲ್ಲಿ ಇಂದು ಮೊದಲ ಡಬಲ್ ಹೆಡರ್ ನಡೆಯಲಿದೆ. ದಿನದ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ಹಣಾಹಣಿ ನಡೆಸಿದರೆ. ಎರಡನೇ ಕಾದಾಟದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಕಳೆದ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಹೊಸ ಆತ್ಮವಿಶ್ವಾಸದೊಂದಿಗೆ ಅಖಾಡಕ್ಕಿಳಿಯಲಿವೆ. ಮೊಹಾಲಿಯ ಬಿಂದ್ರಾ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿದ್ದು, ಗೆಲುವಿನ ನಿರೀಕ್ಷೆಯೊಂದಿಗೆ 16ನೇ ಸೀಸನ್ ಜರ್ನಿ ಆರಂಭಿಸಲು ಸಜ್ಜಾಗಿವೆ. ಆದರೆ ಉಭಯ ತಂಡಗಳಿಗೆ ಗಾಯದ ಸಮಸ್ಯೆ ಮತ್ತು ವಿದೇಶಿ ಆಟಗಾರರ ಅಲಭ್ಯತೆ ಎದುರಾಗಿದ್ದು, ಪ್ಲೇಯಿಂಗ್ ಇಲೆವನ್ ಆಯ್ಕೆ ಕಠಿಣವಾಗಿದೆ.

ಮೇಲ್ನೋಟಕ್ಕೆ ಎರಡು ತಂಡಗಳು ಸಮಬಲದಿಂದ ಕೂಡಿದ್ದರೂ, ಜಾನಿ ಬೈರ್ಸ್ಟೋ ಅನುಪಸ್ಥಿತಿ ಪಂಜಾಬ್‌ಗೆ ಹಿನ್ನಡೆ ಮೂಡಿಸಲಿದೆ. ಶಿಖರ್ ಧವನ್ ಸಾರಥ್ಯದಲ್ಲಿ ಪಂಜಾಬ್ ಕಿಂಗ್ಸ್ ಈ ಬಾರಿ ಮೈದಾನಕ್ಕೆ ಇಳಿಯಲಿದ್ದು, ಆಟಗಾರರಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದೆ. ಮತ್ತೊಂದೆಡೆ
ಕೋಲ್ಕತ್ತಾ ಸಹ ಹೊಸ ಕ್ಯಾಪ್ಟನ್ ಮುಂದಾಳತ್ವದಲ್ಲಿ ಕಣಕ್ಕಿಳಿಯುತ್ತಿದ್ದು, ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ನಿತೀಶ್ ರಾಣಾ ಕೆಕೆಆರ್ ತಂಡದ ಕ್ಯಾಪ್ಟನ್ ಜವಾಬ್ದಾರಿ ಹೊತ್ತಿದ್ದಾರೆ. ಈ ಪಂದ್ಯದಲ್ಲಿ ಶಕೀಬ್ ಅಲ್ ಹಸನ್, ಲಿಟನ್ ದಾಸ್ ಆಡದ ಹಿನ್ನೆಲೆಯಲ್ಲಿ, ಆ್ಯಂಡ್ರೆ ರಸೆಲ್, ಸುನಿಲ್ ನರೈನ್, ಡೇವಿಡ್ ವೀಸೆ, ವೆಂಕಟೇಶ್ ಅಯ್ಯರ್ ಅವರ ಮೇಲೆ ಜವಾಬ್ದಾರಿ ಹೆಚ್ಚಿದೆ.
ದಿನದ ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಮೊದಲ ಹಣಾಹಣಿ ನಡೆಸಲಿವೆ. ಲಕ್ನೋದ ಏಕಾನಾ ಮೈದಾನದಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಎರಡು ತಂಡಗಳು ತಯಾರಾಗಿದ್ದು, ಗೆಲುವಿನ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಲು ಸಜ್ಜಾಗಿವೆ. ಲಕ್ನೋ ತಂಡ ಇದೇ ಮೊದಲ ಬಾರಿಗೆ ತವರಿನಲ್ಲಿ ಪಂದ್ಯವಾಡುತ್ತಿದ್ದು, ಆಟಗಾರರ ಆತ್ಮವಿಶ್ವಾಸ ಹೆಚ್ಚಿಸಲಿದೆ. ಇತ್ತೀಚಿಗೆ ಫಾರ್ಮ್ ವೈಫಲ್ಯಕ್ಕೆ ಸಿಲುಕಿದ್ದ ಲಕ್ನೋ ತಂಡದ ನಾಯಕ ಕೆ.ಎಲ್.ರಾಹುಲ್ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಈ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ಸಹ ಹೊಸ ನಾಯಕತ್ವದಲ್ಲಿ ಮೈದಾನಕ್ಕಿಳಿಯುತ್ತಿದ್ದು, ರಿಷಬ್ ಪಂತ್ ಅನುಪಸ್ಥಿತಿಯಲ್ಲಿ
ಡೇವಿಡ್ ವಾರ್ನರ್ ಹೊಸ ಜವಾಬ್ದಾರಿ ಹೊತ್ತಿದ್ದಾರೆ.
ಡೆಲ್ಲಿ ತಂಡಕ್ಕೆ ಪಂತ್ ಅನುಪಸ್ಥಿತಿ ಹೆಚ್ಚಿನ ಸಮಸ್ಯೆ ಆದರೂ, ಆಸಿಸ್ ಬ್ಯಾಟರ್ ಮಿಚೆಲ್ ಮಾರ್ಷ್, ಪೃಥ್ವಿ ಶಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಇನ್ನೂ ಆಲ್ರೌಂಡರ್ ಅಕ್ಸರ್ ಪಟೇಲ್ ಉತ್ತಮ ಫಾರ್ಮ್ ಕಂಡುಕೊಂಡಿರುವುದು ಡೆಲ್ಲಿ ತಂಡಕ್ಕೆ ಆಧಾರವಾಗಲಿದೆ.




