ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷ್ಯಚಿತ್ರ 'ದಿ ಎಲಿಫೆಂಟ್ ವಿಸ್ಪರರ್ಸ್' ನಲ್ಲಿ ಕಾಣಿಸಿಕೊಂಡಿರುವ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಾಕಿದ್ದ ಆನೆ ಮರಿಯೊಂದು ಅನಾರೋಗ್ಯದ ಕಾರಣ ಮೃತಪಟ್ಟಿದೆ.
ತಮಿಳುನಾಡಿನ ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರದಲ್ಲಿ ಈ ಘಟನೆ ನಡೆದಿದೆ.
ಮಾರ್ಚ್ 9 ರಂದು ತಮಿಳುನಾಡಿನ ಧರ್ಮಪುರಿಯಲ್ಲಿ ಬಾವಿಯೊಳಗೆ ಆನೆ ಮರಿ ಪತ್ತೆಯಾಗಿತ್ತು. ಅರಣ್ಯ ಪಶುವೈದ್ಯರು ಮತ್ತು ಬೊಮ್ಮನ್ ಅವರು ಅಲ್ಲಿಗೆ ತೆರಳಿ ಒಂದು ವಾರ ಕಾಲ ಆನೆ ಮರಿಯನ್ನು ಆರೈಕೆ ಮಾಡಿದ್ದರು. ಅವರು ಅದನ್ನು ಅದರ ಹಿಂಡಿಗೆ ಹಿಂದಿರುಗಿಸಲು ಪ್ರಯತ್ನಿಸಿದ್ದರು. ಆದರೆ, ಈ ಪ್ರಯತ್ನ ವ್ಯರ್ಥವಾಯಿತು.

ಬಳಿಕ ಆನೆ ಮರಿ ನೋಡಿಕೊಳ್ಳಲು ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ನಿಯೋಜಿಸಲಾಗಿತ್ತು. ತನ್ನ ಗುಂಪಿನಿಂದ ಬೇರ್ಪಟ್ಟ ೪ ತಿಂಗಳು ವಯಸ್ಸಿನ ಆನೆ ಮರಿಗೆ ಲ್ಯಾಕ್ಟೋಜೆನ್ ನೀಡಲಾಗುತ್ತಿತ್ತು. ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಹಾಗೂ ತನ್ನ ಹಿಂಡಿನಿಂದ ಬೇರ್ಪಟ್ಟ ಒತ್ತಡದ ಕಾರಣದಿಂದಾಗಿ ಮೃತಪಟ್ಟಿದೆ ಎಂದು ಪ್ರಾಥಮಿಕ ಶವ ಪರೀಕ್ಷೆ ವರದಿ ಹೇಳಿದೆ.

ಗುರುವಾರ ಮಧ್ಯಾಹ್ನದವರೆಗೆ ಆನೆ ಮರಿಯ ಆರೋಗ್ಯ ಸಾಮಾನ್ಯವಾಗಿತ್ತು ಎಂದು ಎಂಟಿಆರ್ ನಿರ್ದೇಶಕ ಡಿ.ವೆಂಕಟೇಶ್ ತಿಳಿಸಿದ್ದಾರೆ. ಆದರೆ ಸಂಜೆಯ ಹೊತ್ತಿಗೆ ಬೇಧಿ ಉಂಟಾಗಿದ್ದು, ರಾತ್ರಿಯವರೆಗೂ ಹಾಗೇ ಇತ್ತು. “ಪಶುವೈದ್ಯರ ತಂಡವು ಆನೆ ಮರಿಗೆ ಚಿಕಿತ್ಸೆ ನೀಡಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟಿದೆ” ಎಂದು ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ಇನ್ನು, ಪಶುವೈದ್ಯರು ಲ್ಯಾಬ್ ಪರೀಕ್ಷೆಗಾಗಿ ಮೃತದೇಹದ ಪ್ರಮುಖ ಭಾಗಗಳ ಮಾದರಿಗಳನ್ನು ಸಂಗ್ರಹಿಸಿದ ಬಳಿಕ ಬೊಮ್ಮನ್ ಹಾಗು ಅರಣ್ಯ ಸಿಬ್ಬಂದಿ ಆನೆ ಮರಿ ಶವಸಂಸ್ಕಾರಕ್ಕೂ ಮುನ್ನ ಧಾರ್ಮಿಕ ವಿಧಿವಿಧಾನಗಳನ್ನು ಅನುಸರಿಸಿದ್ದಾರೆ.




