ಮೈಸೂರು : ಚಾಮರಾಜನಗರ ಕರ್ನಾಟಕ ರಾಜ್ಯದ ಪ್ರಮುಖ ಭಾಗ, ಈ ಜಾಗದಲ್ಲಿ ದೋಷವಿಲ್ಲ, ದೃಷ್ಟಿಯಲ್ಲಿ ದೋಷವಿದೆ, ಮುಂದೆಯೂ ಅಭಿವೃದ್ಧಿ ವಿಷಯದಲ್ಲಿ ಅಗತ್ಯ ಬಿದ್ದಾಗಲೆಲ್ಲಾ ಚಾಮರಾಜನಗರಕ್ಕೆ ಭೇಟಿ ನೀಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್. ಎ. ರಾಮದಾಸ್ ಅವರು ತಮ್ಮ ಕ್ಷೇತ್ರದಲ್ಲಿ ಆಯೋಜಿಸಿದ್ದ 20 ದಿನಗಳ ಮೋದಿ ಯುಗ್ ಉತ್ಸವ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಹೋಗುತ್ತೆ ಅನ್ನೋದೆಲ್ಲಾ ಸುಳ್ಳು ಎಂದು ಪ್ರತಿಪಾದಿಸಿದರು.

ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದಿನ ಕೈಗೊಂಡ ರೈತರ ಮಕ್ಕಳಿಗೆ ಶಿಷ್ಯವೇತನ ನೀಡುವ ರೈತ ವಿದ್ಯಾನಿಧಿ ಯೋಜನೆ ಕುರಿತು ಕೇಂದ್ರ ಸರ್ಕಾರ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದು, ಯೋಜನೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಹಳ ಸಂತಸ ವ್ಯಕ್ತಪಡಿಸಿದ್ದಾರೆ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದರು.
ಬರುವ ದಿನಗಳಲ್ಲಿ ಅಮೃತ ನಗರೋತ್ಥಾನ ಯೋಜನೆಯನ್ನು ರಾಜ್ಯದ ಎಲ್ಲಾ ಮಹಾನಗರ ಪಾಲಿಕೆ, ನಗರಸಭೆ , ಪುರಸಭೆ ಪಟ್ಟಣ ಪಂಚಾಯಿತಿಗಳಲ್ಲಿ ಜಾರಿ ಮಾಡುವುದಾಗಿ ಇದೇ ಸಂದರ್ಭದಲ್ಲಿ ಮಹತ್ವದ ಘೋಷಣೆ ಮಾಡಿದರು. ಮೈಸೂರಿನ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಕಟ್ಟಡ ಪುನಶ್ಚೇತನಕ್ಕೆ ಕ್ರಮಕೈಗೊಳ್ಳಲಾಗುವುದು.

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಭೂಸ್ವಾಧೀನಕ್ಕಾಗಿ ಮುಂದಿನ ಆಯವ್ಯಯದಲ್ಲಿ ಅನುದಾನ ಒದಗಿಸಲಾಗುವುದು. ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಫಿಲ್ಮ್ ಸಿಟಿ ಯೋಜನೆಯನ್ನು ಜಾರಿಗೊಳಿಸಲಾಗುವುದು, ಇದರೊಂದಿಗೆ ಮೈಸೂರು ನಗರದಲ್ಲಿ ವಿದ್ಯುತ್ ಮಿತವ್ಯಯದ ದೃಷ್ಟಿಯಿಂದ 60 ಸಾವಿರ ಎಲ್ ಇ ಡಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 150 ಕೋಟಿ ರೂ. ಒದಗಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಆರ್ಥಿಕ ಹಿಂಜರಿತವಿದ್ದರೂ, ಅಭಿವೃದ್ಧಿ ವೇಗ ಕುಂಠಿತವಾಗಬಾರದು ಎಂಬ ಆಶಯದೊಂದಿಗೆ ಅಭಿವೃದ್ಧಿ ಯೋಜನೆಗಳ ಆದ್ಯತೆಗಳನ್ನು ಮರು ನಿಗದಿ ಪಡಿಸಿ, ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಶಾಸಕರು, ಜನತೆ ಸಹಕಾರ ನೀಡಿದರೆ, ಈ ಸಂಕಷ್ಟದಿಂದ ಶೀಘ್ರವೇ ಪಾರಾಗುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳು ನುಡಿದರು.
ಸಮಾರಂಭದಲ್ಲಿ ಸಚಿವರಾದ ಎಸ್.ಟಿ.ಸೋಮಶೇಖರ್, ಬಿ.ಎ. ಬಸವರಾಜ, ಮೈಸೂರು ಮೇಯರ್ ಸುನಂದಾ ಫಾಲನೇತ್ರ, ಶಾಸಕರಾದ ರಾಮದಾಸ್, ನಾಗೇಂದ್ರ ಮತ್ತಿತರರು ಉಪಸ್ಥಿತರಿದ್ದರು.




