ಮೈಸೂರು : ನಾನು ಕೋಲಾರದಿಂದ ಸ್ಪರ್ಧೆ ಮಾಡುವ ವಿಚಾರವನ್ನು ಹೈಕಮಾಂಡ್ ತೀರ್ಮಾನ ಮಾಡಬೇಕಿದೆ, ನಾಡಿದ್ದು ನಡೆಯುವ ಸಭೆಯಲ್ಲಿ ತೀರ್ಮಾನ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜ ಮತ್ತು ಚಾಮುಂಡೇಶ್ವರಿ ಕ್ಷೇತ್ರದ ಟಿಕೇಟ್ ವಿಚಾರ ನಾಡಿದ್ದು ಇತ್ಯರ್ಥವಾಗಬಹುದು. ನಾಡಿದ್ದು ಕೇಂದ್ರ ಚುನಾವಣಾ ಸಮಿತಿ ಸಭೆ ಇದೆ, ಅಂದು ಇತ್ಯರ್ಥವಾಗಬಹುದು. ಈ ಸಭೆಯ ನಂತರ ಎರಡನೇ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರವನ್ನು ಬಿಜೆಪಿ ಪ್ರಮುಖ ಕ್ಷೇತ್ರವಾಗಿ ಪರಿಗಣಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಯಾರನ್ನು ಯಾರಿಂದಲೂ ಕಟ್ಟಿಹಾಕಲು ಸಾಧ್ಯವಿಲ್ಲ, ಒಬ್ಬರನ್ನು ಸೋಲಿಸುವುದು ಗೆಲ್ಲಿಸುವುದು ಜನರ ಕೈಲಿದೆ. ನಾನು ನಾಮಪತ್ರ ಸಲ್ಲಿಕೆಗೆ ಮಾತ್ರ ವರುಣಾಗೆ ಹೋಗುತ್ತೇನೆ. ಯತೀಂದ್ರ ಅವರು ಅಲ್ಲಿನ ಹಾಲಿ ಶಾಸಕರು, ಅವರು ಕೂಡ ಅಲ್ಲಿ ನನ್ನ ಪರವಾಗಿ ಕೆಲಸ ಮಾಡುತ್ತಾರೆ ಎಂದರು.

ಚುನಾವಣೆಯಲ್ಲಿ ನನ್ನ ಎದುರಾಳಿ ಯಾರು ಎಂಬ ಬಗ್ಗೆ ಯೋಚನೆ ಮಾಡಲು ಹೋಗಲ್ಲ, ಯಾರು ನಮ್ಮ ಶಾಸಕರಾಗಬೇಕು ಎಂದು ತೀರ್ಮಾನ ಮಾಡುವುದು ಜನ. ಜನರ ಆಶೀರ್ವಾದ ಮುಖ್ಯವಾಗುತ್ತೆ, ಯಾರು ನಮ್ಮಲ್ಲಿ ಗೆದ್ದರೆ ಕ್ಷೇತ್ರ ಅಭಿವೃದ್ಧಿ ಮಾಡುತ್ತಾರೆ ಎಂದು ತೀರ್ಮಾನ ಮಾಡಬೇಕಾಗಿರುವುದು ಜನ. ಎದುರಾಳಿ ಯಾರೇ ಇರಲಿ ಅದರ ಬಗ್ಗೆ ನನಗೆ ಚಿಂತೆ ಇಲ್ಲ ಎಂದರು.
ಸರ್ಕಾರ ತರಾತುರಿಯಲ್ಲಿ, ಅವೈಜ್ಞಾನಿಕವಾಗಿ ಮೀಸಲಾತಿ ಪರಿಷ್ಕರಣೆ ಮಾಡಿದೆ. ಅವರ ಉದ್ದೇಶ ಒಳ್ಳೆಯದಿಲ್ಲ. ಮೀಸಲಾತಿ ಕೊಡಬೇಕು ಎಂದಿದ್ದರೆ ಅದರ ಬಗ್ಗೆ ಅಧ್ಯಯನ ಮಾಡಿ ಸಂವಿಧಾನಬದ್ಧವಾಗಿ, ವೈಜ್ಞಾನಿಕವಾಗಿ ನೀಡುತ್ತಿದ್ದರು. ಒಳಮೀಸಲಾತಿ ವಿಚಾರವಾಗಿ ಸರ್ಕಾರ 4 ವರ್ಷದಿಂದ ಸುಮ್ಮನಿದ್ದು ಚುನಾವಣೆ ಬಂದಾಗ ಓಟಿಗಾಗಿ ಕೊನೆ ಘಳಿಗೆಯಲ್ಲಿ ಜಾರಿ ಮಾಡಿದ್ದಾರೆ ಎಂದು ಟೀಕಿಸಿದರು.
ಕೆಟಗರಿ 2ಬಿ ಯನ್ನು ರದ್ದು ಮಾಡಿದ್ದು ಯಾಕೆ? ಇದು 1995 ಜನವರಿಯಿಂದ ಇತ್ತು, ಚಿನ್ನಪ್ಪ ರೆಡ್ಡಿ ಅವರ ಸಮಿತಿಯ ವರದಿ ಆಧರಿಸಿ ಈ ಮೀಸಲಾತಿ ನೀಡಲಾಗಿತ್ತು. ಈಗ ಮೀಸಲಾತಿಯನ್ನು ತೆಗೆದುಹಾಕಿದರೆ ಅದು ಸೇಡಿನ ರಾಜಕಾರಣವಾಗಲ್ವಾ? ಎಂದು ಪ್ರಶ್ನಿಸಿದರು.
ಪ್ರಧಾನಿ ಸೇರಿದಂತೆ ಎಲ್ಲರಿಗೂ ಒಂದು ನೀತಿ
ಪ್ರಧಾನಿಗಳು ಸರ್ಕಾರಿ ಕಾರ್ಯಕ್ರಮಕ್ಕೆ ಹೇಗೆ ಬಂಡೀಪುರಕ್ಕೆ ಬರುತ್ತಾರೆ? ಅವರು ಬರುವುದಕ್ಕೆ ನಾನೇನು ಅಡ್ಡಿಪಡಿಸುವುದಿಲ್ಲ. ಅವರಿಗೆ ಚುನಾವಣಾ ಆಯೋಗದವರು ಅನುಮತಿ ನೀಡಿದ್ದಾರಾ? ಅನುಮತಿ ಇಲ್ಲದೆ ಬಂದರೆ ನೀತಿ ಸಂಹಿತಿಯ ಉಲ್ಲಂಘನೆ ಮಾಡಿದಂತಾಗುತ್ತದೆ. ಪ್ರಧಾನಿಗಳಿಗೆ ಒಂದು, ಮುಖ್ಯಮಂತ್ರಿಗೆ ಒಂದು, ಮಂತ್ರಿಗಳಿಗೆ ಒಂದು, ಶಾಸಕರಿಗೆ ಒಂದು ಎಂದು ಬೇರೆ ಬೇರೆ ಕಾನೂನು ಇಲ್ಲ. ನೀತಿ ಸಂಹಿತಿ ಎಲ್ಲರಿಗೂ ಅನ್ವಯವಾಗುತ್ತದೆ. ಚುನಾವಣಾ ಆಯೋಗ ಬೇಕಾದರೆ ಅನುಮತಿ ನೀಡಬಹುದು ಎಂದು ಅಭಿಪ್ರಾಯಪಟ್ಟರು.
#SIDDARAMAIAH #FORMERCM #OPPOSITIONPARTYLEADER #CONGRESS #SECONDLIST #VARUNA #BJP #BYVIJAYENDRA #PRIMEMINISTER #BHANDIPURVISIT




