16ನೇ ಆವೃತ್ತಿಯ ಐಪಿಎಲ್ ಕದನದಲ್ಲಿ ಸೋಲಿನ ಆರಂಭ ಕಂಡಿರುವ ಚೆನ್ನೈ ಸೂಪ,ರ್ ಕಿಂಗ್ಸ್ ಇಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಸವಾಲು ಎದುರಿಸಲಿದೆ.
ಉಭಯ ತಂಡಗಳ ನಡುವಿನ ಹಣಾಹಣಿಗೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ವೇದಿಕೆ ಸಜ್ಜಾಗಿದ್ದು, 16ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸೋಲಿನ ಆಘಾತ ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್, ಇಂದಿನ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡುವ ಲೆಕ್ಕಾಚಾರದಲ್ಲಿದ್ದರೆ. ಭರ್ಜರಿ ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಲಕ್ನೋ ಸೂಪರ್ ಜೈಂಟ್ಸ್ ಇದೇ ಆತ್ಮವಿಶ್ವಾಸದಿಂದ ಕಣಕ್ಕಿಳಿಯಲಿದೆ. ಐಪಿಎಲ್ ಟೂರ್ನಿಯಲ್ಲಿ ತನ್ನದೇ ಪ್ರಾಬಲ್ಯ ಹೊಂದಿರುವ ಚೆನ್ನೈ ಪಡೆ, ಬರೋಬ್ಬರಿ 1427 ದಿನಗಳ ಬಳಿಕ ಚೆಪಾಕ್ ಮೈದಾನದಲ್ಲಿ ಧೋನಿ ಸಾರಥ್ಯದಲ್ಲಿ ಆಡುತ್ತಿರುವುದು ಈ ಪಂದ್ಯದ ವಿಶೇಷ.

ಗುಜರಾತ್ ಟೈಟನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಚೆನ್ನೈ ಬೌಲಿಂಗ್‌ನಲ್ಲಿ ನಿರೀಕ್ಷಿತ ಆಟವಾಡಲು ಸಾಧ್ಯವಾಗದೆ ಸೋಲಿನ ಆಘಾತ ಕಂಡಿತ್ತು. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಅವರ ಭರ್ಜರಿ ಬ್ಯಾಟಿಂಗ್ ಹೊರತಾಗಿ ಉಳಿದ ಬ್ಯಾಟ್ಸಮನ್ ಗಳಿಂದ ನಿರೀಕ್ಷಿತ ಪ್ರದರ್ಶನ ಬಾರದಿರುವುದು ತಂಡದ ಸೋಲಿಗೆ ಕಾರಣವಾಯಿತು. ಇದರ ಜೊತೆಗೆ ತಂಡದ ಬೌಲಿಂಗ್ ವಿಭಾಗ ಅಷ್ಟೊಂದು ಪರಿಣಾಮ ಬೀರದ ಕಾರಣದಿಂದಲೂ ಚೆನ್ನೈ ಸೋಲಿನ ಕಹಿ ಅನುಭವಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡು ವಿಭಾಗದಲ್ಲಿ ಧೋನಿ ಹುಡುಗರು ಬಲಿಷ್ಟ ಪ್ರದರ್ಶನ ನೀಡಿದರೆ ಮಾತ್ರ ಜಯದ ಹಾದಿ ಹುಡುಕಿಕೊಳ್ಳಲು ಸಾಧ್ಯವಾಗಲಿದೆ.

ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಜೊತೆಗೆ ಬೌಲಿಂಗ್‌ನಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದ ಲಕ್ನೋ ಸೂಪರ್ ಜೈಂಟ್ಸ್, ಬಲಿಷ್ಠ ತಂಡವಾಗಿ ಮುನ್ನಡೆಯುವ ಭರವಸೆ ಮೂಡಿಸಿದೆ. ವೆಸ್ಟ್ ಇಂಡೀಸ್ ತಂಡದ ಯುವ ಬ್ಯಾಟರ್ ಕೈಲ್ ಮೈಯರ್ಸ್ ಅವರ ಸ್ಪೋಟಕ ಬ್ಯಾಟಿಂಗ್ ಹಾಗೂ ಇಂಗ್ಲೆಂಡಿನ ವೇಗದ ಬೌಲರ್ ಮಾರ್ಕ್ ವುಡ್ ಅವರ ಆಕ್ರಮಣಕಾರಿ ಪ್ರದರ್ಶನ ಲಕ್ನೋ ತಂಡಕ್ಕೆ 50 ರನ್‌ಗಳ ಗೆಲುವು ತಂದುಕೊಟ್ಟಿತ್ತು. ಈ ಪ್ರದರ್ಶನದ ಮೂಲಕ 16ನೇ ಸೀಸನ್‌ನಲ್ಲಿ ಗೆಲುವಿನ ಆರಂಭ ಕಂಡಿರುವ ಕೆಎಲ್ ರಾಹುಲ್ ಸಾರಥ್ಯದ ಲಕ್ನೋ, ಚೆನ್ನೈ ವಿರುದ್ಧವೂ ಇದೇ ಪ್ರದರ್ಶನ ಮುಂದುವರಿಸುವ ಲೆಕ್ಕಾಚಾರ ಹೊಂದಿದೆ.
ಒಟ್ಟಾರೆ ಸೋಲು-ಗೆಲುವಿನ ಆರಂಭ ಕಂಡಿರುವ ಚೆನ್ನೈ ಹಾಗೂ ಲಕ್ನೋ ನಡುವಿನ ಸೂಪರ್ ಫೈಟ್ ಕುತೂಹಲ ಮೂಡಿಸಿದ್ದರೆ, ತವರಿನಲ್ಲಿ ನಡೆಯುತ್ತಿರುವ ಈ ಪಂದ್ಯ ಚೆನ್ನೈ ತಂಡದ ಅಭಿಮಾನಿಗಳಿಗೆ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.




