Death Threat To Jaya Mruthyunjaya Swamiji: ಜಯಮೃತ್ಯುಂಜಯ ಸ್ವಾಮೀಜಿಗೆ ಕೊಲೆ ಬೆದರಿಕೆ: ಶಾಸಕ ಅರವಿಂದ್ ಬೆಲ್ಲದ್

ಬೆಂಗಳೂರು: ಲಿಂಗಾಯತ ಪಂಚಮಸಾಲಿ ಸಮುದಾಯದ ಮೀಸಲಾತಿಗಾಗಿ ಹೋರಾಟ ಮಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಹೋರಾಟದಲ್ಲಿ ಭಾಗವಹಿಸಿದ್ದ ಕೆಲ ನಾಯಕರಿಂದಲೇ ಕೊಲೆ ಬೆದರಿಕೆ ಬಂದಿದೆ ಎಂದು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಮತ್ತು ಸಚಿವ ಸಿಸಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಅರವಿಂದ್ ಬೆಲ್ಲದ್ ಮತ್ತು ಸಚಿವ ಸಿಸಿ ಪಾಟೀಲ್, ನಿರಂತರ ಹೋರಾಟದ ಮೂಲಕ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಕಲ್ಪಿಸಿದ ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿಗೆ ಕೆಲವರು ಮಧ್ಯರಾತ್ರಿ ಕುಡಿದು ಕರೆ ಮಾಡಿ ಧಮ್ಕಿ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಈ ಕುರಿತಾಗಿ ನೋವನ್ನು ತೋಡಿಕೊಂಡಿದ್ದಾರೆ. ಯಾರು ಧಮ್ಕಿ ಹಾಕುತ್ತಿದ್ದಾರೆಂದು ನಮ್ಮ ಸಮುದಾಯಕ್ಕೆ ಗೊತ್ತಿದೆ. ಪುನಾ ಧಮ್ಕಿ ಹಾಕಿದರೆ ಏನು ಮಾಡಬೇಕು  ಅನ್ನೋದು ಸಹ ನಮಗೆ ಗೊತ್ತಿದೆ. ಮೀಸಲಾತಿ ವಿಚಾರದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸವನ್ನು ಯಾರು ಮಾಡಿಲ್ಲ. ಇದು ಕಾಂಗ್ರೆಸ್​ನವರು ಮಾಡುತ್ತಿರುವ ಅಪಪ್ರಚಾರ ಎಂದು‌ ವಿನಯ್ ಕುಲಕರ್ಣಿ ಹಾಗೂ ಕಾಶಪ್ಪನವರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.

ಸ್ವಾಮೀಜಿಗೆ ಭದ್ರತೆ ನೀಡಲು ಸಿಎಂ ಸೂಚನೆ:

ಕೂಡಲಸಂಗಮ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿಗೆ ಕೊಲೆ ಬೆದರಿಕೆ ಕರೆ ಹಿನ್ನೆಲೆ ಸ್ವಾಮೀಜಿಗೆ ಭದ್ರತೆ ನಿಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ಜಯಮೃತ್ಯುಂಜಯ ಸ್ವಾಮೀಜಿ ಅವರು, ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿದ್ದರು. ಈ ಫಲವಾಗಿ ಇತ್ತೀಚೆಗೆ ರಾಜ್ಯ ಸರ್ಕಾರ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಿದೆ. ಇದರಿಂದ ಬಿಜೆಪಿಗೆ ಕ್ರೆಡಿಟ್‌ ಹೋಗಿದ್ದು, ಕಾಂಗ್ರೆಸ್‌ಗೆ ಬರಬೇಕಿದ್ದ ಎಲ್ಲ ಪಂಚಮಸಾಲಿ ಮತ್ತು ಲಿಂಗಾಯತ ಮತಗಳು ಬಿಜೆಪಿಗೆ ಹೋಗಲಿವೆ. ಇದರಿಂದ ಕುಪಿತಗೊಂಡ ಕೆಲವು ಜನಪ್ರತಿನಿಧಿಗಳು ಸ್ವಾಮೀಜಿಗೆ ರಾತ್ರಿ ವೇಳೆ ಕುಡಿದು ಕರೆ ಮಾಡಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜಯ ಮೃತ್ತುಂಜಯ ಸ್ವಾಮೀಜಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ನೀಡಿದ್ದಾರೆ.
ಭದ್ರತೆಗಾಗಿ ಶಾಸಕರಿಂದ ಮನವಿ: ಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಭದ್ರತೆ ಮಾಹಿತಿ ನೀಡಿದ್ದರು. ಅರವಿಂದ ಬೆಲ್ಲದ್  ಮನವಿ ಮೇರೆಗೆ ಕೂಡಲೇ ಸ್ವಾಮೀಜಿಗೆ ಸೂಕ್ತ ಭದ್ರತೆ ಕೊಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್ ನಾಯಕರಿಂದ ಕಿರುಕುಳ:

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅರವಿಂದ್ ಬೆಲ್ಲದ್, ಮೀಸಲಾತಿ ಹೋರಾಟ ಮುಕ್ತಾಯವಾಗಿದೆ. ಸಮುದಾಯಕ್ಕೂ ನ್ಯಾಯ ದೊರಕಿದೆ. ಆದರೆ ಕಾಂಗ್ರೆಸ್ ಕೆಲ ನಾಯಕರು ರಾತ್ರಿ ಕುಡಿದು ಸ್ವಾಮೀಜಿಗಳಿಗೆ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಸ್ವಾಮೀಜಿಗಳು  ನೊಂದಿದ್ದಾರೆ. ಸ್ವಾಮಿಜಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಹೋರಾಟದಲ್ಲಿ ಭಾಗಿಯಾಗಿದ್ದಾರೆ.  ಆದರೆ, ಕಾಂಗ್ರೆಸ್ನ ಕೆಲ ನಾಯಕರಿಂದ ಸ್ವಾಮೀಜಿ ಕಿರುಕುಳ ಎದುರಿಸುತ್ತಿದ್ದಾರೆ ಎಂದರು.

ಮೀಸಲಾತಿಯಿಂದ ಕಾಂಗ್ರೆಸ್‌ಗೆ ಗರ ಬಡಿದಿದೆ

ರಾಜ್ಯದಲ್ಲಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿರುವುದು ಕಾಂಗ್ರೆಸ್‌ಗೆ ಗರ ಬಡಿದಂತಂತಾಗಿದೆ. ವೀರಶೈವ ಸಮುದಾಯದ ಎಲ್ಲಾ ವರ್ಗಕ್ಕೆ ಮೀಸಲಾತಿ ನೀಡಿರುವುದು ಕಾಂಗ್ರೆಸ್ ಸಹಿಸುತ್ತಿಲ್ಲ. ಹೀಗಾಗಿ ಅವರು ಸ್ವಾಮೀಜಿಯನ್ನು ವಿರೋಧಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ಮೋಹನ್ ಲಿಂಬಿಕಾಯಿ ಪಾರ್ಟಿಯಲ್ಲಿದ್ದು, ಸ್ಥಾನಮಾನಕ್ಕೆ ಪ್ರಯತ್ನ ಮಾಡುತ್ತಿದ್ದರು. ಆದರೆ, ಈಗ ಅವರು ಕಾಂಗ್ರೆಸ್ ಗೆ ಸೇರ್ಪಡೆಯಾದರು. ಇನ್ನು ಬಹುತೇಕ ಎಲ್ಲ ಶಾಸಕರಿಗೂ ಟಿಕೆಟ್ ಸಿಗಲಿದೆ. ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ನೀಡುವ ವಿಚಾರವಾಗಿ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.

More News