ಐಪಿಎಲ್ ಟೂರ್ನಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಗುಜರಾತ್ ಟೈಟನ್ಸ್ ತಂಡದ ಯುವ ಬ್ಯಾಟರ್ ಸಾಯಿ ಸುದರ್ಶನ್ ಟೀಂ ಇಂಡಿಯಾದ ಭವಿಷ್ಯದ ಸೂಪರ್ ಸ್ಟಾರ್ ಆಗುವ ಭರವಸೆ ಮೂಡಿಸಿದ್ದಾರೆ.
ಪ್ರಸಕ್ತ ಆವೃತ್ತಿಯಲ್ಲಿ ಜವಾಬ್ದಾರಿಯ ಬ್ಯಾಟಿಂಗ್‌ನಿಂದ ಗುಜರಾತ್ ತಂಡದ ಬೆನ್ನೆಲುಬಾಗಿರುವ 21 ವರ್ಷದ ಎಡಗೈ ಬ್ಯಾಟರ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 62*(46) ಆಕರ್ಷಕ ಅರ್ಧಶತಕ ಬಾರಿಸಿ ಗುಜರಾತ್ ತಂಡಕ್ಕೆ 6 ವಿಕೆಟ್‌ಗಳ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಸಾಯಿ ಸುದರ್ಶನ್ ಅವರ ಈ ಪ್ರದರ್ಶನಕ್ಕೆ ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ಭಾರತ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜ ಸುನೀಲ್ ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಯಿ ಸುದರ್ಶನ್ ಅತಿ ಶೀಘ್ರದಲ್ಲೇ ಟಾಪ್ ಲೆವೆಲ್ ಪ್ಲೇಯರ್ ಅಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಟೈಟನ್ಸ್ ತಂಡದ ಮೊದಲ ಕ್ರಮಾಂಕದ ಬ್ಯಾಟರ್ ಆಗಿ ಕಣಕ್ಕಿಳಿಯುವ ಸಾಯಿ ಸುದರ್ಶನ್, 2022ರಲ್ಲಿ ಗುಜರಾತ್ ಟೈಟನ್ಸ್ ತಂಡದ ಚೊಚ್ಚಲ ಐಪಿಎಲ್ ಟೂರ್ನಿಯಲ್ಲಿ ಆಕರ್ಷಕ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದರು. ಇದಾದ ಬಳಿಕ ದೇಸಿಯ ಕ್ರಿಕೆಟ್‌ನಲ್ಲೂ ಮಿಂಚಿದ್ದ ಸುದರ್ಶನ್, ವಿಜಯ್ ಹಜಾರೆ ಟ್ರೋಫಿಯಲ್ಲಿ 3 ಶತಕದ ಸಹಿತ 610 ರನ್‌ಗಳಿಸಿ ಮಿಂಚಿದ್ದರು. ಇನ್ನೂ ರಣಜಿ ಟ್ರೋಫಿಯಲ್ಲಿ ಸಹ ಇದೇ ಪ್ರದರ್ಶನ ನೀಡಿದ್ದ ತಮಿಳುನಾಡು ಮೂಲದ ಯುವ ಆಟಗಾರ, 7 ಪಂದ್ಯಗಳಲ್ಲಿ ಎರಡು ಶತಕದ ನೆರವಿನಿಂದ 572 ರನ್‌ಗಳಿಸಿ ಗಮನ ಸೆಳೆದಿದ್ದರು.
ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಮೂಲಕ ಮಿಂಚುತ್ತಿರುವ ಯುವ ಆಟಗಾರ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡದಿದ್ದರು, ಡೆಲ್ಲಿ ವಿರುದ್ಧ ಅಜೇಯ ಅರ್ಧಶತಕ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.
ಸಾಯಿ ಸುದರ್ಶನ್ ಪ್ರದರ್ಶನದ ಬಗ್ಗೆ ಮಾತನಾಡಿರುವ ಸುನೀಲ್ ಗವಾಸ್ಕರ್, ಯುವ ಬ್ಯಾಟರ್ ತಮ್ಮ ಫಾರ್ಮ್ ಮುಂದುವರಿಸುವ ಮೂಲಕ ತಮಗೆ ಲಭಿಸುವ ಎಲ್ಲಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ. ಅಲ್ಲದೇ ಸಾಯಿ ಸುದರ್ಶನ್ ಅವರ ಆತ್ಮವಿಶ್ವಾಸ ನನ್ನಲ್ಲಿ ಅಚ್ಚರಿಯನ್ನ ಉಂಟುಮಾಡಿದೆ. ಈ ಪ್ರದರ್ಶನದ ಮೂಲಕ ಇವರು ಭವಿಷ್ಯದಲ್ಲಿ ಟೀಂ ಇಂಡಿಯಾದ ಕದ ತಟ್ಟಲಿದ್ದು, ಇವರ ಈ ಪ್ರದರ್ಶನ ಹಲವು ಯುವ ಆಟಗಾರರಿಗೆ ಸ್ಪೂರ್ತಿಯಾಗಲಿದೆ ಎಂದು ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.




