ನಟಿ ಲೀಲಾವತಿ ಪತಿ ಮಹಾಲಿಂಗ ಭಾಗವತರ್?! ಆ ದಂಪತಿ ಮಗ ವಿನೋದ್ ರಾಜ್? ಹೀಗೊಂದು ಹೊಸ ವಿವಾದ ಹುಟ್ಟುಕೊಂಡಿದೆ. ನಿರ್ದೇಶಕ ಪ್ರಕಾಶ್ ರಾಜ್ ಮೇಹು ಎಂಬುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ನಟಿ ಲೀಲಾವತಿ ಹಾಗೂ ಮಹಾಲಿಂಗ ಭಾಗವತರ್ ಕುರಿತು ಬರೆದುಕೊಂಡಿದ್ದಾರೆ."ನಟಿ ಲೀಲಾವತಿ ಪತಿ ಮಹಾಲಿಂಗ ಭಾಗವತರ್. ವಿನೋದ್ ರಾಜ್‌ಗೆ ಮದುವೆ ಆಗಿ ಒಬ್ಬ ಮಗನಿದ್ದಾನೆ" ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಡಾ. ರಾಜ್‌ಕುಮಾರ್ ಹಾಗೂ ಲೀಲಾವತಿ ಪುತ್ರ ವಿನೋದ್ ರಾಜ್ ಎನ್ನುವ ವಿವಾದ ದಶಕಗಳಿಂದಲೂ ಇದೆ. ಆದರೆ, ಬಹುತೇಕರು ಇದು ಕಟ್ಟು ಕಥೆ ಎಂದೇ ಹೇಳುತ್ತ ಅಲ್ಲಗಳೆದಿದ್ದಾರೆ. ಲೀಲಾವತಿ ಅವರಿಗೆ ಮಹಾಲಿಂಗ ಭಾಗವತರ್ ಎಂಬುವವರ ಜೊತೆ ಮದುವೆ ಆಗಿತ್ತು. ಆ ದಂಪತಿ ಮಗ ವಿನೋದ್ ರಾಜ್. ಇದಕ್ಕೆ ಸಾಕ್ಷಿಯೂ ದೊರಕಿದೆ ಎಂದು ನಿರ್ದೇಶಕ ಪ್ರಕಾಶ್ ರಾಜ್ ಮೇಹು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಒಂದು ಕಾಲದಲ್ಲಿ ನಿರ್ದೇಶಕ ಪ್ರಕಾಶ್ ರಾಜ್ ಮೇಹು ಡಾ. ರಾಜ್‌ಕುಮಾರ್ ಕುಟುಂಬಕ್ಕೆ ಆಪ್ತರಾಗಿದ್ದರು. ಡಾ.ರಾಜ್ ಅವರ ಜೊತೆಗೂ ಒಡನಾಟದಲ್ಲಿದ್ದರು. ದೊಡ್ಮನೆಯ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನ ಒಂದರಲ್ಲಿ ತಾವೇ ಖುದ್ದು ಡಾ. ರಾಜ್‌ಕುಮಾರ್ ಬಳಿ, “ಅಣ್ಣಾ ಲೀಲಾವತಿಯವರು ಎಲ್ಲಾ ಕಡೆ ವಿನೋದ್ ರಾಜ್ ನಿಮ್ಮ ಮಗ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಇದು ಏನಣ್ಣಾ?” ಎಂದು ಕೇಳಿದ್ದೆ ಎಂದಿದ್ದರು. ಅದಕ್ಕೆ ಅಣ್ಣಾವ್ರು ಉತ್ತರಿಸಿದ್ದರು.ಇದೀಗ ಪ್ರಕಾಶ್ ರಾಜ್ ಮೇಹು ವಿವಾದಕ್ಕೆ ಸಾಕ್ಷಿ ಸಿಕ್ಕಿದೆ ನೋಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
“ಇದುವರೆಗಿನ ವಿವಾದಕ್ಕೆ ಎಷ್ಟೇ ಸ್ಪಷ್ಟನೆ ಕೊಟ್ಟರೂ ಕೆಲವರು ಒಪ್ಪುತ್ತಿರಲಿಲ್ಲ. ಅಂತಹವರಿಗೆ ಇದು ಸತ್ಯ ಸಾಕ್ಷಿ. ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದಕ್ಕೆ ಸಾಕ್ಷಿ ಇಲ್ಲಿದೆ ನೋಡಿ. ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚೆನ್ನೈ ಆಸ್ತಿಯ ಪತ್ರ. ಅದು ತಮಿಳು ಭಾಷೆಯಲ್ಲಿದೆ. ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ” ಎಂದು ಹೇಳಿದ್ದಾರೆ.
“ವಿನೋದ್ ರಾಜ್‌ಗೂ ಮದುವೆ ಆಗಿದೆ”

ಮುಂದುವರೆದು ಮಾತನಾಡಿದ ಅವರು, ಲೀಲಾವತಿ ಹಾಗೂ ಮಹಾಲಿಂಗ ಭಾಗವತರ್ ಅವರ ಮದುವೆ ಆಗಿದೆ. ಅಷ್ಟೇ ಅಲ್ಲದೆ, ವಿನೋದ್ ರಾಜ್‌ಗೂ ಮದುವೆ ಆಗಿದೆ” ಎಂದಿದ್ದಾರೆ. “ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾ ಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ ಚೆನ್ನೈನಲ್ಲಿದ್ದಾರೆ. ಅವರ ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ. ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು. ಆಗಲೇ ಈ ಫೋಟೋ ಪ್ರಕಟಿಸಿದ್ದರೆ, ಅವರು ಖಂಡಿತ ಅವರು ಯಾರೋ ಅಭಿಮಾನಿಗಳು ಅನ್ನುತ್ತಿದ್ದರು. ಅದಕ್ಕಾಗಿ ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ. ಇಂದು ಗೆಳೆಯರೊಬ್ಬರು ಚೆನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು. ಆದ್ದರಿಂದ ಇಂದು ಇದನ್ನು ಬಹಿರಂಗ ಪಡಿಸಿದ್ದೇನೆ” ಎಂದು ಪ್ರಕಾಶ್ ರಾಜ್ ಮೇಹು ಬರೆದುಕೊಂಡಿದ್ದಾರೆ. ಫೇಸ್‌ಬುಕ್ ನಲ್ಲಿ ಪ್ರಕಾಶ್ ರಾಜ್ ಮೇಹು ಅವರ ಬರಹಕ್ಕೆ ಹಲವರಿಂದ ಪರ-ವಿರೋಧ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಈ ವಿವಾದವನ್ನು ಕೂಲಂಕಶವಾಗಿ ಪರಿಶೀಲಿಸಿ ಅಂತ್ಯ ಹಾಡಿ ಎಂದು ಕೋರಿದ್ದಾರೆ. ಇನ್ನು ಕೆಲವರು ಈ ಬಗ್ಗೆ ಲೀಲಾವತಿ ಹಾಗೂ ವಿನೋದ್ ರಾಜ್ ಪ್ರತಿಕ್ರಿಯೆ ನೀಡಬೇಕು ಅಂದಿದ್ದಾರೆ. ಒಟ್ಟಿನಲ್ಲಿ ಈ ವಿವಾದಾತ್ಮಕ ಹೇಳಿಕೆಗೆ ಲೀಲಾವತಿ ಹಾಗೂ ವಿನೋದ್ ರಾಜ್ ತೆರೆ ಎಳೆಯುತ್ತಾರೋ ಕಾದು ನೋಡಬೇಕಿದೆ.




