Navlagunda Ticket Fight: ನವಲಗುಂದ ಟಿಕೆಟ್ ಘೋಷಣೆ ಮುನ್ನವೇ ಭಿನ್ನಮತ-ರಾಜೀನಾಮೆ ಪರ್ವ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಟಿಕೆಟ್ ಘೋಷಣೆ ಮುನ್ನವೇ ಭಿನ್ನಮತ ಭುಗಿಲೇಳುವ ಜತೆಗೆ ರಾಜೀನಾಮೆ ಪರ್ವವೂ ಶುರುವಾಗಿದೆ.ಎನ್.ಹೆಚ್.ಕೋನರೆಡ್ಡಿ ಅವರಿಗೆ ಟಿಕೆಟ್ ನೀಡಲು ಹೈಕಮಾಂಡ್ ನಿರ್ಧಾರ ಮಾಡಿದೆ ಎಂದು ಮುನಿಸಿಕೊಂಡು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ ರಾಜೀನಾಮೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿರುವ ಶಿವಾನಂದ ಕರಿಗಾರ, ನನ್ನನ್ನು ಪಕ್ಷ ಉಪಯೋಗಿಸಿಕೊಂಡು ಈಗ ಕೈಬಿಟ್ಟಿದೆ. ಪಕ್ಷಕ್ಕೆ ದುಡಿದವರನ್ನು ಬದಿಗೆ ಸರಿಸಿ ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡುತ್ತಿದ್ದಾರೆ. ಎನ್.ಹೆಚ್.ಕೋನರೆಡ್ಡಿ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಆದ್ದರಿಂದ ನಾನು‌ ಮನನೊಂದು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ನಾನು ಎರಡು ಬಾರಿ ನವಲಗುಂದ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಈ ಬಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ‌ ಎಂದು ತಿಳಿಸಿದರು.

ಈ‌ ಹಿಂದೆ ಮಾಜಿ‌ ಸಚಿವ ವಿನಯ್ ಕುಲಕರ್ಣಿ, ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಲೆ ಸೇರ್ಪಡೆಯಾಗಿದ್ದೆ. ಆ ವೇಳೆ 2018 ರ‌ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇವೆಂದು ಭರವಸೆ ನೀಡಿದ್ದರು. ಆದರೆ ಅಂದು ಸಹ‌ ನನಗೆ ಟಿಕೆಟ್ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಈ ಬಾರಿ ನಾನು ಸಹ ಟಿಕೆಟ್ ಕೇಳಿದ್ದೆ. ಈಗಲೂ ಟಿಕೆಟ್ ನೀಡಲಿಲ್ಲ. ನನಗೆ ‌ಪಕ್ಷ ದ್ರೋಹ ಮಾಡಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ. ಸಚಿವ ಶಂಕರ್ ಪಾಟೀಲ ಮುನೇನಕೊಪ್ಪ ಅವರನ್ನು ಸೋಲಿಸುವುದೆ ನನ್ನ ಗುರಿ ಎಂದು ಸ್ಪಷ್ಟಪಡಿಸಿದರು.
ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಬಳಿ‌ ಹಣ ಇರಬಹುದು. ನನ್ನಲ್ಲಿ ಹಣ ಗಳಿಸುವ ಶಕ್ತಿ ಇದೆ ಎಂದು ಏಕವಚನದಲ್ಲಿ ಸಚಿವ ಮುನೇನಕೊಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

ಮುನೇನಕೊಪ್ಪ ಮನೆ ಮನೆಗೆ ಹೋಗುವುದು ನನ್ನಿಂದ. ಮುನೇನಕೊಪ್ಪ ಸೂಚನೆಯಂತೆ ನಾನು ಅಖಾಡಕ್ಕೆ ಇಳಿಯುತ್ತಿದ್ದೇನೆ ಎನ್ನುವುದೆಲ್ಲ ಕಟ್ಟು ಕಥೆ. ಇಂತಹ ಊಹಾಪೋಹಗಳಿಗೆ  ಗಮನಹರಿಸಬಾರದು. ನನ್ನ ಬಗ್ಗೆ ಸುಖಾಸುಮ್ಮನೆ ಮಾತನಾಡಿದರೆ ಸುಮ್ಮನೆ ಇರುವುದಿಲ್ಲ. ಮುನೇನಕೊಪ್ಪ ಅಷ್ಟೇ ಅಲ್ಲ, ನವಲಗುಂದ ಕ್ಷೇತ್ರದ ಯಾರೊಬ್ಬರೂ ನನ್ನ ಬಗ್ಗೆ ಅಪಪ್ರಚಾರ ಮಾಡಬಾರದು. ನನಗೆ ಸೂಚನೆ ಕೊಡುವಂಥ ಧಮ್ ಸಚಿವ ಮುನೇನಕೊಪ್ಪ ಸೇರಿದಂತೆ ಯಾರಿಗೂ ಇಲ್ಲ‌‌ ಎಂದರು.

More News