ಹುಬ್ಬಳ್ಳಿ: ಇವತ್ತಿಗೆ ವರಿಷ್ಠರನ್ನು ಭೇಟಿಯಾಗಿ ಎರಡು ದಿನವಾಗಿದೆ. ನಾಳೆ ಬೆಳಗ್ಗೆ ಹನ್ನೊಂದು ಗಂಟೆಯವರೆಗೆ ಕಾದು ನಂತರ ಬೆಂಬಲಿಗರ ಸಭೆ ನಡೆಸಿ ಮುಂದಿನ ತೀರ್ಮಾನ ಘೋಷಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಾಸಿಟಿವ್ ಆಗಿ ಯೋಚನೆ ಮಾಡುತ್ತಿದ್ದೇನೆ. ಇನ್ನೂ ಆಶಾಭಾವ ಹೊಂದಿದ್ದೇನೆ. ನಾಳೆ ಅಭಿಮಾನಿಗಳು ಬರುತ್ತಿದ್ದಾರೆ. ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಗದೀಶ್ ಶೆಟ್ಟರ್ ವರಿಷ್ಠರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಬೇರೆ ಜಿಲ್ಲೆಯಿಂದಲೂ ಬೆಂಬಲಿಗರು ಬರುತ್ತಿದ್ದು, ಎಲ್ಲರೂ ಜಗದೀಶ್ ಶೆಟ್ಟರ್ ಅವರಿಗೆ ಅಪಮಾನ ಆಗಿದೆ ಅಂತೀದಾರೆ, ಮೂರನೇ ಲಿಸ್ಟ್ ಗೆ ಎಲ್ಲಿವರೆಗೆ ಕಾಯುತ್ತೀರಿ, ಕಾಯೋದಕ್ಕೂ ಒಂದು ಲಿಮಿಟ್ ಇರುತ್ತೆ, ನಾಳೆಯವರೆಗೂ ಕಾಯಲಾಗುವುದು ಎಂದು ತಿಳಿಸಿದರು.
ಮೊದಲ ಲೀಸ್ಟ್ ನಲ್ಲಿಯೇ ನನ್ನ ಹೆಸರು ಪ್ರಕಟವಾಗಬೇಕಿತ್ತು, ಆದರೆ, ಅದನ್ನು ವರಿಷ್ಟರು ಮಾಡಲಿಲ್ಲ, ಇದು ನನಗೆ ಅಲ್ಲ ನನ್ನ ಮತದಾರರಿಗೂ ಮಾಡಿದ ಅಪಮಾನ. ನಾನು ಕಾಡಿ, ಬೇಡಿ ಟಿಕೆಟ್ ಕೇಳಲ್ಲ, ವರಿಷ್ಠರು ಫೋನ್ ಮಾಡಿದ್ದಕ್ಕೆ ಹೋಗಿದ್ದೆ ಎಂದು ಸ್ಪಷ್ಟಪಡಿಸಿದರು.
ಜೋಶಿ ಅವರು ರಾಷ್ಟ್ರೀಯ ಅಧ್ಯಕ್ಷರ ಮುಂದೆ ನನ್ನ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ, ಇಲ್ಲ ಅಂತಲ್ಲ, ಆದ್ರೆ ರಿಸಲ್ಟ್ ಏನು ಎಂದ ಪ್ರಶ್ನಿಸಿದ ಶೆಟ್ಟರ್, ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವರ್ತನೆಯ ವಿರುದ್ಧ ಅಸಮಾಧಾನ ಹೊರಹಾಕಿದರು.
ನಮ್ಮ ಕುಟುಂಬದಿಂದ ಯಾರೂ ಸ್ಪರ್ಧೆ ಮಾಡಲ್ಲ, ನಾನೇ ಸ್ಪರ್ಧೆ ಮಾಡುತ್ತೇನೆ, ಕಾಂಗ್ರೆಸ್ ಆಗಲಿ ಬೇರೆ ಯಾರೇ ಆಗಲಿ ನನಗೆ ಸಂಪರ್ಕ ಮಾಡಿಲ್ಲ ಎಂದು ಇದೇ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದರು.
ಬೆಂಬಲಿಗರ ಅತೃಪ್ತಿ – ರಾಜೀನಾಮೆ
ಹೈಕಮಾಂಡ್ ಧೋರಣೆಗೆ ಜಗದೀಶ್ ಶೆಟ್ಟರ್ ಅವರ ಬೆಂಬಲಗರು ಅತೃಪ್ತಿ ವ್ಯಕ್ತಪಡಿಸಿದ್ದು, ಶೆಟ್ಟರ್ ಬೆಂಬಲಿಗರಿಂದ ರಾಜೀನಾಮೆ ನೀಡಿದ್ದಾರೆ. ಸಾಮೂಹಿಕ ರಾಜೀನಾಮೆ ಘೋಷಿಸಿದ ಶೆಟ್ಟರ್ ಬೆಂಬಲಿಗರು, ಮಹಾನಗರ ಪಾಲಿಕೆಯ 16 ಸದಸ್ಯರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹಾಗೆಯೇ ಪಕ್ಷದ ನಾನಾ ಸ್ಥಾನದಲ್ಲಿದ್ದ ಪದಾಧಿಕಾರಿಗಳೂ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಸತತ ಆರು ಬಾರಿ ಗೆದ್ದವರಿಗೆ ಅಪಮಾನ ಮಾಡಲಾಗಿದೆ, ಅದನ್ನು ಸರಿಪಡಿಸಿ ಅವರಿಗೆ ಟಿಕೆಟ್ ನೀಡಬೇಕು ಇಲ್ಲದಿದ್ದಲ್ಲಿ ನಾವೆಲ್ಲ ಪಕ್ಷ ವಿರುದ್ಧ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನೆ ಮಾಡಿದ್ದಾರೆ.




