Siddaramaiah Hand Pain: ಕೈನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯ: ಫೋನ್ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೈನೋವಿನಿಂದ ಬಳಲುತ್ತಿದ್ದಾರೆ. ಕೈ ನೋವು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಬಾಲ್ಕಿಯಲ್ಲಿ ನಡೆಯುತ್ತಿರುವ ರಾಹುಲ್ ಗಾಂಧಿ ಪ್ರಚಾರ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರೆ ಮಾಡಿ ಆರೋಗ್ಯ ವಿಚಾರಿಸಿದ ರಾಹುಲ್ ಗಾಂಧಿ ಸದ್ಯ ಒಂದೆರಡು ದಿನ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದರು.

ಸೋಮವಾರ ಮಧ್ಯಾಹ್ಮ ಫೋನ್ ಕರೆ ಮಾಡಿದ ರಾಹುಲ್ ಗಾಂಧಿ ಸಿದ್ದರಾಮಯ್ಯ ಅವರ ಆರೋಗ್ಯ ವಿಚಾರಿಸಿದರು. ಎರಡು ಮೂರು ದಿನಗಳ ಕಾಲ ರೆಸ್ಟ್ ಮಾಡಿ, ಬಳಿಕ ಕ್ಯಾಂಪೇನ್ ಮಾಡಬಹುದು ಎಂದು ಸಲಹೆ ನೀಡಿದರು. ರಾಜಕೀಯ ಇದ್ದಿದ್ದೇ, ಆದರೆ ಆರೋಗ್ಯ ನೋಡಿಕೊಳ್ಳಿ ಎಂದರು.

ಬಲ ಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ಜ್ವರವೂ ಕಾಣಿಸಿಕೊಂಡಿತ್ತು. ಈ ಕಾರಣಕ್ಕಾಗಿ ಅವರು ಕೈಗೆ ಬ್ಯಾಂಡೇಜ್ ಸುತ್ತಿಕೊಂಡಿದ್ದರು. ಸದ್ಯ ಬೈಬೆರಳುಗಳು ಊದಿಕೊಂಡಿದ್ದು, ವೈದ್ಯರು ಕೂಡಾ ವಿಶ್ರಾಂತಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರು ಸೋಮವಾರ ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ಜಗದೀಶ್ ಶೆಟ್ಟರ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ತಮ್ಮ ನಿವಾಸದಲ್ಲೇ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

80 ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಪ್ಲ್ಯಾನ್

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಪರವಾಗಿ 80 ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರವನ್ನು ಕೈಗೊಳ್ಳಲು ಪ್ಲ್ಯಾನ್ ರೂಪಿಸಿಕೊಂಡಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಮಾಡಿ ಪ್ರಚಾರ ನಡೆಸಲಿದ್ದಾರೆ. ಬೃಹತ್ ಸಮಾವೇಶ ನಡೆಯಲಿರುವ ಮೈದಾನ ಪಕ್ಕದಲ್ಲೇ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಗೆಲ್ಲುವ ಸಾಧ್ಯತೆ ಹೆಚ್ಚಿರುವ ಹಾಗೂ ಪ್ರಭಾವಿ ಶಾಸಕರ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವ ಬದಲಾಗಿ ಪೈಪೋಟಿ ಇರುವ ಕ್ಷೇತ್ರಗಳಿಗೆ ಹೆಚ್ಚಿನ ಒತ್ತನ್ನು ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಸ್ಪರ್ಧೆ ಮಾಡುವ ಕನಕಪುರ, ಕೆಜೆ ಜಾರ್ಜ್ ಕ್ಷೇತ್ರ, ದಿನೇಶ್ ಗುಂಡೂರಾವ್ ಕ್ಷೇತ್ರ ಸೇರಿದಂತೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುವ ಬದಲಾಗಿ ಕಠಿಣ ಕ್ಷೇತ್ರಗಳಿಗೆ ಹೆಚ್ಚಿನ ಒತ್ತನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

More News