Actor Sudeep Campaign: ಸಿಎಂ ಪರ ನಟ ಸುದೀಪ್ ಮೇ ೭ರವರೆಗೆ  ಪ್ರಚಾರ

ರಾಜ್ಯದಲ್ಲಿ ದಿನದಿಂದ ದಿನಕ್ಕೆ ವಿಧಾನಸಭಾ ಚುನಾವಣೆಯ ಭರಾಟೆ ಜೋರಾಗುತ್ತಿದ್ದು, ರಾಷ್ಟ್ರೀಯ ಪಕ್ಷಗಳು ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ನಿರತರಾಗಿದ್ದಾರೆ.

ಇನ್ನು ಟಿಕೆಟ್ ಗೊಂದಲ, ಬಂಡಾಯದ ಬಿಸಿಯ ಮಧ್ಯೆಯೇ ಟಿಕೆಟ್ ಸಿಕ್ಕವರು ನಾಮಪತ್ರ ಸಲ್ಲಿಸುತ್ತಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾಂವಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಇಂದು ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ಈ ನಡುವೆ ಬಿಜೆಪಿ ೪೦ ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಬೆಂಬಲ ಸೂಚಿಸಲು ಶಿಗ್ಗಾಂವಿಗೆ ಆಗಮಿಸುತ್ತಿದ್ದಾರೆ. ಈ ಹಿಂದೆ ಸಿಎಂ ಬೊಮ್ಮಾಯಿ ಪರ ಪ್ರಚಾರ ಮಾಡುತ್ತೇನೆ ಎಂದು ಕಿಚ್ಚ ಸುದೀಪ್ ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸುದೀಪ್ ಅವರ ಈ ನಿರ್ಧಾರವನ್ನು ಕೆಲವರು ವಿರೋಧಿಸಿದ್ದರು. ಟೀಕೆ-ವಿರೋಧಗಳು ಕೇಳಿಬಂದರೂ ಇಂದಿನಿಂದ ಬೊಮ್ಮಾಯಿ ಹಾಗೂ ಅವರು ಸೂಚಿಸಿದ ಕ್ಷೇತ್ರಗಳಿಗೆ ಸುದೀಪ್ ಪ್ರಚಾರ ಮಾಡಲಿದ್ದಾರೆ. ನಟ ಸುದೀಪ್ ಆಗಮನದಿಂದ ಬೊಮ್ಮಾಯಿಗೆ ದೊಡ್ಡ ಬಲವೇ ಸಿಗಲಿದೆ ಎನ್ನಲಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಸಿದ ಬಳಿಕ ಬೃಹತ್ ಪ್ರಚಾರದಲ್ಲಿ ಕಿಚ್ಚ ಸುದೀಪ್ ಭಾಗಿಯಾಗುತ್ತಿದ್ದಾರೆ. ಶಿಗ್ಗಾಂವಿಗೆ ತೆರಳುವ ಮುನ್ನ ಕಿಚ್ಚ ಸುದೀಪ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
“ಪ್ರಚಾರ ಮಾಡುವುದು ನನಗೆ ಹೊಸತೇನೂ ಅಲ್ಲ. ಮೊದಲಿನಿಂದಲೂ ಸ್ನೇಹಿತರಿಗೋಸ್ಕರ ಪ್ರಚಾರ ಮಾಡಿದ್ದೇನೆ. ಈಗ ಸ್ವಲ್ಪ ಮಟ್ಟಿಗೆ ದೊಡ್ಡ ಮಟ್ಟದ ಪ್ರಚಾರಕ್ಕೆ ಇಳಿದಿದ್ದೇನೆ. ಮೊದಲು ನಾನು ಶಿಗ್ಗಾಂವಿಯಿಂದ ಕ್ಯಾಂಪೇನ್ ಪ್ರಾರಂಭ ಮಾಡುತ್ತಿದ್ದೇವೆ. ಎಲ್ಲಾ ಒಳ್ಳೆಯದಾಗುತ್ತದೆ ಎಂದು ಭಾವಿಸಿದ್ದೇನೆ” ಎಂದು ಸುದೀಪ್ ಹೇಳಿಕೆ ನೀಡಿದ್ದಾರೆ.
“ರೋಡ್ ಶೋ ಸಂಬಂಧ ಅವರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ನಾನೀಗ ಅದರ ಬಗ್ಗೆ ಹೇಳುವುದಕ್ಕೆ ಹೋಗುವುದಿಲ್ಲ. ಅವರಾಗಿಯೇ ಎಲ್ಲಾ ಹೇಳುತ್ತಾರೆ. ಅವರ ಯೋಜನೆಗಳನ್ನು ನಾನು ವ್ಯಕ್ತಪಡಿಸಿದರೆ ತಪ್ಪಾಗುತ್ತದೆ” ಎಂದೂ ಹೇಳಿದ್ದಾರೆ.

ಶಿಗ್ಗಾಂವಿಯಲ್ಲಿ ಬೆಳಗ್ಗೆ ೧೧ ಕ್ಕೆ ರೋಡ್ ಶೋ..

ಶಿಗ್ಗಾಂವಿಯ ಪ್ರಮುಖ ರಸ್ತೆಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ನಟ ಸುದೀಪ್ ಬೃಹತ್ ರೋಡ್ ಶೋ ಮಾಡಲಿದ್ದಾರೆ. ಬೆಳಗ್ಗೆ ೧೧ ಗಂಟೆಯಿಂದಲೇ ಸುಮಾರು 1 ಗಂಟೆ 15 ನಿಮಿಷಗಳ ಕಾಲ ರೋಡ್ ಶೋ ನಡೆಯುತ್ತದೆ ಎನ್ನಲಾಗಿದೆ. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕೂಡ ಸಾಥ್ ನೀಡಲಿದ್ದಾರೆ. ಈ ಬೃಹತ್ ರೋಡ್ ಶೋ ನಗರದ ಚೆನ್ನಮ್ಮ ವೃತ್ತ, ಹಳೆ ಬಸ್ ನಿಲ್ದಾಣದಿಂದ ತಾಲ್ಲೂಕು ಕ್ರೀಡಾಂಗಣದವರೆಗೆ ಸುಮಾರು 2 ಕಿ.ಮೀ ನಡೆಯಲಿದೆ ಎನ್ನಲಾಗುತ್ತಿದೆ.

ಮೇ 7ರವರೆಗೂ ಕ್ಯಾಂಪೇನ್
ಖ್ಯಾತ ನಟ ಕಿಚ್ಚ ಸುದೀಪ್ ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಆದ ಬಳಿಕ ಮೊದಲ ಬಾರಿಗೆ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ಇಂದಿನಿಂದ ಅಂದರೆ ಏಪ್ರಿಲ್ 19ರಿಂದ ಶುರುವಾದ ಕ್ಯಾಂಪೇನ್ ಮೇ 7ರವರೆಗೆ ನಡೆಯಲಿದೆ.

” ಸಿಎಂ ಬಸವರಾಜ ಬೊಮ್ಮಾಯಿ ಒಂದು ಲಿಸ್ಟ್ ಹಾಕಿಕೊಂಡಿದ್ದಾರೆ. ಮೇ ೭ ಕೊನೆಯ ದಿನ. ಅಲ್ಲಿಯವರೆಗೂ ರೋಡ್ ಶೋ ಇರುತ್ತದೆ ಅಂತ ಅಂದ್ಕೊಂಡಿದ್ದೇನೆ. ಕಲಾವಿದರು ಅಂದ್ಕೊಂಡ ಮೇಲೆ ಎಲ್ಲರೂ ಪ್ರಚಾರ ಮಾಡುತ್ತಾರೆ. ಒಂದು ಪಕ್ಷ ಅಂತಲ್ಲ. ಎಲ್ಲಾ ಪಕ್ಷದಿಂದಲೂ ಆಫರ್ ಬರುತ್ತೆ. ಅದು ತಪ್ಪೂ ಅಲ್ಲ. ಪ್ರತಿ ವರ್ಷನೂ ಬರುತ್ತಲೇ ಇರುತ್ತೆ. ಈ ವರ್ಷ ಬಿಜೆಪಿ ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದಕ್ಕೆ ಕಾರಣವೇನು ಅಂತ ಸಹ ಈ ಹಿಂದೆಯೇ ಹೇಳಿದ್ದೇನೆ. ಅದರ ಪ್ರಕಾರ ಹೋಗುತ್ತೇನೆ.” ಎಂದು ಸುದೀಪ್ ಶಿಗ್ಗಾಂವಿಗೆ ತೆರೆಳವು ಮುನ್ನ ಮಾಧ್ಯಮಗಳಿಗೆ ತಿಳಿಸಿದ್ದಾರೆ.

More News