ಐಟಿ ದಾಳಿ ಮೂಲಕ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ : ಕೆ ಎಸ್ ಈಶ್ವರಪ್ಪ

ಬಾಗಲಕೋಟೆ : ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಆಪ್ತನ ಮೇಲೆ ಐಟಿ ದಾಳಿ ಮಾಡುವುದರ ಮೂಲಕ ಅವರನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಸಚಿವ ಕೆ ಎಸ್ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬಾಗಲಕೋಟೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಯಡಿಯೂರಪ್ಪನವರೇ ನನ್ನ ಆಪ್ತ ಹೌದು ಅಂತ ಹೇಳಿದ್ದಾರೆ, ಈತನನ್ನು ಬೊಮ್ಮಾಯಿ ಅವರು ಸಹ ಮುಂದುವರೆಸಲು ಹೋಗಿದ್ರು, ಈಗ ತೆಗೆದು ಹಾಕಿದ್ದಾರೆ, ತಪ್ಪು ಯಾರು ಮಾಡಿದರೂ ತಪ್ಪೇ, ಅವರು ತಪ್ಪು ಮಾಡಿಲ್ಲ ಅಂದರೆ ಹೊರಗೆ ಬರ್ತಾರೆ, ಇಲ್ಲಾ ಅಂದ್ರೆ ಶಿಕ್ಷೆ ಅನುಭವಿಸುತ್ತಾರೆ ಎಂದು ತಿಳಿಸಿದರು.
ಯಾರ ಮೇಲೋ ಐಟಿ ದಾಳಿಯಾಗೋದಕ್ಕೂ ಯಡಿಯೂರಪ್ಪನ್ನ ಕಟ್ಟಿ ಹಾಕೋದಕ್ಕೆ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಮನೆಯಲ್ಲಿ ಕೆಲಸಕ್ಕೆ ಅಂತ ಇದ್ದವ ಕದ್ದು ಹೋದರೆ ಯಾರ ಮೇಲೆ ಅನುಮಾನ ಪಡೋದು, ಎಂದಿದ್ದಾರೆ. ಈ ಬಗ್ಗೆ ಯಡಿಯೂರಪ್ಪನವರ ಮೇಲೆ ಅನುಮಾನ ಪಡೋದು ಸರಿಯಲ್ಲ ಎಂದುಸ್ಪಷ್ಟಪಡಿಸಿದರು.
ಐಟಿ ದಾಳಿ ಕೇವಲ ಕಾಂಗ್ರೆಸ್ ನವರ ಮೇಲೆ ಆಗ್ತಿದೆ ಅಂತಿದ್ದವರು ಈಗ್ಯಾಕೆ ಬಾಯಿ ಬಿಡುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಟೀಕಿಸಿದ ಅವರು, ಕಾಂಗ್ರೆಸ್ ಮಾತ್ರ ಅಲ್ಲ, ಐಟಿ ಅವರಿಗೆ ಯಾರ ಮೇಲೆ ಅನುಮಾನ ಇದೆ ಅವರ ಮೇಲೆಲ್ಲಾ ದಾಳಿ ಮಾಡ್ತುತ್ತಾರೆ. ಈಗ ರಾಜ್ಯದ ಮುಂದೆ ಕಾಂಗ್ರಸ್ಸಿನವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನವರೇನು ಸತ್ಯ ಹರಿಶ್ಚಂದ್ರರಾ..? ಎಂದು ಪ್ರಶ್ನಿಸಿದ ಈಶ್ವರಪ್ಪ, ಯಾರ ಮೇಲೆ ಅನುಮಾನ ಇರತ್ತೋ ಅವರ ಮೇಲೆ ಐಟಿ ದಾಳಿ ನಡೆತಿದೆ ಎಂದು ತಿಳಿಸಿದ ಅವರು, ಕೇವಲ ಕಾಂಗ್ರೆಸ್ ನವರ ಮೇಲೆ ದಾಳಿ ಆಗ್ತಿದೆ ಅಂದವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್ ಡಿಕುಮಾರಸ್ವಾಮಿ ಅವರು ಆರ್.ಎಸ್.ಎಸ್ ಮತ್ತು ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಿರುವ ಬಗ್ಗೆ ಮಾತನಾಡಿದ ಅವರು, ಅವರು ಮುಸ್ಲಿಮರ ಓಟ್ ಮೇಲೆ ಕಣ್ಣಿಟ್ಟಿದ್ದಾರೆ, ಹೀಗಾಗಿ ಆರ್.ಎಸ್.ಎಸ್. ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ ಎಂದರು.
IAS, KAS ಅಧಿಕಾರಿಗಳ ಮೂಲಕ ಆರ್.ಎಸ್.ಎಸ್. ಆಡಳಿತ ಮಾಡುತ್ತೇ ಅನ್ನೋದು ಮೆದುಳಿನಲ್ಲಿ ಪೊರೆ ಬಂದವರ ಹೇಳಿಕೆ ಇದಾಗಿದೆ ಎಂದು ವ್ಯಂಗ್ಯವಾಡಿದ ಅವರು, ದೇಶದ ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು & ನಾವೆಲ್ಲರೂ ಸಹ ಆರ್.ಎಸ್.ಎಸ್ ನವರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಆರ್.ಎಸ್.ಎಸ್. ನೇರವಾಗಿ ಏನು ಮಾಡೋಲ್ಲ…ಅದರ ಸ್ವಯಂ ಸೇವಕರು ಎಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡ್ತುತ್ತಾರೆ, ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳೆಲ್ಲಾ ಸೇರಿ ಇಂದು ಪ್ರಧಾನಿ ಮೋದಿ ಜೊತೆಗಿದ್ದಾರೆ.‌..ಪಾಕಿಸ್ತಾನ ಒಂದೇ ಆಗಿದೆ..ಇದು ಆರ್.ಎಸ್.ಎಸ್.ಎಫೆಕ್ಟ್ ಎಂದು ಅಭಿಪ್ರಾಯಪಟ್ಟರು.
ಇಡೀ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ ಅಂತ ಭೂತಗನ್ನಡಿ ಹಿಡಿದು ನೋಡೋ ಸ್ಥಿತಿಯಲ್ಲಿದೆ, ರಾಷ್ಟ್ರಭಕ್ತ ಮುಸಲ್ಮಾನರು ನಮ್ಮ ಜೊತೆಗಿದ್ದಾರೆ, ಉಳಿದ ಕಾಂಗ್ರೆಸ್ ಜೊತೆ ಇರೋ ಮುಸ್ಲಿಮರು ನಮ್ಮ ಜತೆ ಬರುತ್ತಾರೆ ಎಂದು ಈಶ್ವರಪ್ಪ ಹೇಳಿದರು.

More News