ಜೀವನದಲ್ಲಿ ಸಾಧನೆ ಮಾಡಬೇಕೆಂಬ ಹಂಬಲವೇ ಯುವಕರಲ್ಲಿ ಮಾನಸಿಕ ಖಿನ್ನತೆಗೆ ಎಡೆ ಮಾಡಿಕೊಡುತ್ತಿದೆಯಾ? ಹೌದು, ಹೀಗೊಂದು ಅನುಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ. ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತವೆ ಅಧ್ಯಯನಗಳು.
ಜೀವನದಲ್ಲಿ ಅದೂ ಅತೀ ಕಡಿಮೆ ಸಮಯದಲ್ಲಿ ನಾವು ಉನ್ನತ ಸ್ಥಾನಕ್ಕೇರಬೇಕು, ಹಣವಂತರಾಗಬೇಕು, ನಮ್ಮೆಲ್ಲ ಕನಸುಗಳನ್ನು ಬೇಗನೇ ಸಾಕಾರಗೊಳಿಸಬೇಕು, ಸ್ಟಾರ್ ಪಟ್ಟ ಗಿಟ್ಟಿಸಿಕೊಳ್ಳಬೇಕು, ಇಲ್ಲವೇ ಇತರರನ್ನು ಹಿಂದಿಕ್ಕಲು ಅತಿ ಹೆಚ್ಚು ಅಂಕಗಳನ್ನು ಗಳಿಸಬೇಕು…ಹೀಗೆ ಒಂದಿಲ್ಲೊಂದು ಬದುಕಿನಲ್ಲಿ ತಾವು ಅಂದುಕೊಂಡದ್ದನ್ನು ಸಾಧಿಸಲೇಬೇಕು ಎಂಬ ತುಡಿತ ಯುವ ಜನತೆಯನ್ನು ಒತ್ತಡಗಳ ಬಲೆಯಲ್ಲಿ ಸಿಲುಕಿಸುತ್ತಿದೆ ಎನ್ನಲಾಗುತ್ತಿದೆ.

ತಮ್ಮ ಕನಸುಗಳನ್ನು ಹೇಗಾದರೂ ಮಾಡಿ ಈಡೇರಿಸಿಕೊಳ್ಳಬೇಕು ಎಂದು ಹಠಕ್ಕೆ ಬಿದ್ದವರು ಅಂತಿಮವಾಗಿ ತಮ್ಮ ನೆಮ್ಮದಿ, ಖುಷಿ ಕಳೆದುಕೊಂಡು ಅನಾಥರಾಗುತ್ತಿದ್ದಾರೆ. ಇನ್ನೊಂದು ಕಡೆ ಕ್ಷಣಿಕ ಸುಖದ ದಾರಿ ಹಿಡಿದವರೂ ಕೊನೆಗೆ ಯಾರೂ ಜತೆಗಿರದೆ ಒಂಟಿತನಕ್ಕೆ ಬಲಿಯಾಗುತ್ತಿದ್ದಾರೆ.ಉದಾಹರಣೆಗೆ ಕೊರಿಯನ್ ನಲ್ಲಿ ತೀರ ಸಣ್ಣ ವಯಸ್ಸಿಗೆ ಸ್ಟಾರ್ ಆಗ್ಬೇಕು ಅಂತ ಆಸೆ ಪಟ್ಟವರು ಫ್ಯಾಷನ್, ಸಿಂಗಿಂಗ್ ಕ್ಷೇತ್ರದತ್ತ ಮುಖ ಮಾಡುತ್ತಿದ್ದಾರೆ. ಸ್ಟಾರ್ ಆಗ್ಬೇಕು ಅನ್ನೋ ಭರದಲ್ಲಿ ಮಾನಸಿಕ ಖಿನ್ನತೆಗೆ ಬಲಿಯಾದ ವರದಿಗಳಿವೆ.
ಈಗ ದಕ್ಷಿಣ ಕೊರಿಯಾದ ಜನಪ್ರಿಯ ಕೊರಿಯನ್ ಪಾಪ್ ಗಾಯಕ ಮೂನ್‌ಬಿನ್ ಸಾವಿನ ಸುದ್ದಿ ಎಲ್ಲರನ್ನು ಬೆಚ್ಚಿಬೀಳಿಸಿದೆ. ಈತನ ನಿಧನದ ಸುತ್ತ ಅನುಮಾನ ಮೂಡಿದೆ. ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ಗಾಯಕರು ಹಾಗು ನಟರ ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸರಣಿ ಸಾವಿನ ಸದ್ದು ಕಳೆದ ಐದಾರು ವರ್ಷಗಳಿಂದ ಹೆಚ್ಚಾಗಿದೆ ಎನ್ನಲಾಗಿದೆ. ಇದು ಈಗ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.

ಏ.೧೯ ರ ಬುಧವಾರ ರಾತ್ರಿ ಸ್ವಂತ ಅಪಾರ್ಟ್‌ಮೆಂಟ್‌ನಲ್ಲಿ ಪಾಪ್ ಗಾಯಕ ಮೂನ್‌ಬಿನ್ ಮೃತದೇಹ ಪತ್ತೆಯಾಗಿದೆ. ಗಾಯಕ ಮೂನ್‌ಬಿನ್ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಕೇವಲ 25 ವರ್ಷ ವಯಸ್ಸಿನಲ್ಲೇ ನಟರಾಗಿ ಮತ್ತು ಗಾಯಕರಾಗಿ ಗುರುತಿಸಿಕೊಂಡವರು. ಅಲ್ಲಿನ ಪ್ರಸಿದ್ಧ ಬಾಯ್ ಬ್ಯಾಂಡ್ ಆಸ್ಟ್ರೋದ ಗಾಯಕರಾಗಿ ಸಂಗೀತ ಪ್ರಿಯರ ಗಮನ ಸೆಳೆದಿದ್ದವರು. ಇದೀಗ ಪಾಪ್ ಗಾಯಕ ಮೂನ್‌ಬಿನ್ ಹಠಾತ್ ಸಾವು ಕೊರಿಯನ್ ಅಭಿಮಾನಿಗಳನ್ನು ಬೆಚ್ಚಿಬೀಳಿಸಿದೆ. ವಿಶ್ವದ ಮೂಲೆ ಮೂಲೆಯಲ್ಲಿರುವ ಸಂಗೀತ ಪ್ರಿಯರು ಈ ಸುದ್ದಿ ಕೇಳಿ ತಮ್ಮ ಪ್ರೀತಿಯ ಗಾಯಕನಿಗೆ ಕಂಬನಿ ಮಿಡಿಯುತ್ತಿದ್ದಾರೆ.
ದಕ್ಷಿಣ ಕೊರಿಯಾದ ಸಿಯೋಲ್‌ನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಮೂನ್‌ಬಿನ್ ವಾಸವಿದ್ದರು. ಏಪ್ರಿಲ್ 19ರ ರಾತ್ರಿ ದಿಢೀರನೇ ಮೂನ್‌ಬಿನ್ ಸಾವನ್ನಪ್ಪಿರುವ ಬಗ್ಗೆ ಸುದ್ದಿ ಹೊರಬಿದ್ದಿತ್ತು. ಮೂನ್‌ಬಿನ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸಿಯೋಲ್‌ನ ಗಂಗ್ನಮ್ ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ದಕ್ಷಿಣ ಕೊರಿಯಾದಲ್ಲಿ ಗಾಯಕ-ನಟರ ನಿಗೂಢ ಸಾವು…
ದಕ್ಷಿಣ ಕೊರಿಯಾದಲ್ಲಿ ಇತ್ತೀಚೆಗೆ ನಟರು ಹಾಗೂ ಗಾಯಕರು ನಿಗೂಢವಾಗಿ ಸಾವನ್ನಪ್ಪುತ್ತಿದ್ದಾರೆ. ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹೀಗೆ ಚಿಕ್ಕ ವಯಸ್ಸಿನಲ್ಲಿ ಹಲವರು ಸಾವಿನ ಕದ ತಟ್ಟುತ್ತಿರುವುದು ಅಭಿಮಾನಿಗಳು, ತಜ್ಞರನ್ನು ಚಿಂತೆಗೀಡುಮಾಡಿದೆ.

ಕೊರಿಯಾದಲ್ಲಿನ ನಟರು-ಗಾಯಕರ ಸಾವಿನ ಪಟ್ಟಿ ನೋಡುವುದಾದರೆ, ಜೊಂಗ್ಹ್ಯುನ್- ದಕ್ಷಿಣ ಕೊರಿಯಾದ ಅತೀ ದೊಡ್ಡ ಬಾಯ್ ಬ್ಯಾಂಡ್. ಶಿನೀಯ ಗಾಯಕ ಜೊಂಗ್ಹ್ಯುನ್ 2017ರಲ್ಲಿ ಸಾವನ್ನಪ್ಪಿದ್ದರು. ೨೦೧೯ ರಲ್ಲಿ ಗೂ ಹಾರಾ ಸಿಯೋಲ್‌ನ ತನ್ನ ಮನೆಯಲ್ಲಿ ಮೃತಪಟ್ಟಿದ್ದರು. ಕೊರಿಯನ್ ಪಾಪ್ ಸ್ಟಾರ್ ಸುಲ್ಲಿ ಕೂಡ ಇದೇ ವರ್ಷ ಆತ್ಮಹತ್ಯೆಗೆ ಶರಣಾಗಿದ್ದರು. ಬಾಯ್ ಬ್ಯಾಂಡ್ 100%ನ ಮಿನ್ವೂ ಆತನ ಮನೆಯಲ್ಲಿ ಸಾವನ್ನಪ್ಪಿದ್ದರು. ಆತನ ಸಾವಿಗೆ ಕಾರಣ ಹೃದಯಾಘಾತ ಎನ್ನಲಾಗಿತ್ತು. ಇದೀಗ ಮೂನ್‌ಬಿನ್ ಹಠಾತ್ ಸಾವನ್ನಪ್ಪಿದ್ದಾರೆ. ಸದ್ಯ ಇವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಮೂನ್‌ಬಿನ್ ಸಾವಿನ ಬಗ್ಗೆ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಮೂನ್‌ಬಿನ್ ದಿಢೀರ್ ಸಾವಿನಿಂದ ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ದಾರೆ. ಮೂನ್‌ಬಿನ್ ಫೆಬ್ರವರಿ 2016ರಲ್ಲಿ ಫ್ಯಾಂಟಜಿಯೊ ಲೇಬಲ್ ಮೂಲಕ ಗಾಯಕನಾಗಿ ಪಾಪ್ ಜಗತ್ತಿಗೆ ಎಂಟ್ರಿ ಕೊಟ್ಟಿದ್ದರು. ಮೂನ್‌ಬಿನ್ ಸಾವು ಆತ್ಮಹತ್ಯೆ ಇರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ತನಿಖೆ ಬಳಿಕವೇ ಸತ್ಯಾಸತ್ಯತೆ ಹೊರಬೀಳಲಿದೆ. ಅದೇನೇ ಇರಲಿ, ಅತಿ ವೇಗದಲ್ಲಿ ಎಲ್ಲವರನ್ನೂ ಪಡೆಯಬೇಕೆಂಬ ಹಸಿವು ಜೀವಕ್ಕೆ ಕುತ್ತಾಗಬಾರದು ಅಲ್ಲವೇ?




