ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆ ದಿನವಾಗಿದ್ದರಿಂದ ಸಾಕಷ್ಟು ಬಿರುಸಿನ ವಿದ್ಯಮಾನಗಳಿಗೆ ಸಾಕ್ಷಿಯಾಯಿತು.
ಕನಕಪುರ ಬಂಡೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಇಂದು ಸಂಸದ ಹಾಗೂ ಡಿ ಕೆ ಶಿವಕುಮಾರ್ ಅವರ ಸಹೋದರ ಡಿ ಕೆ ಸುರೇಶ್ ನಾಮಪತ್ರ ಸಲ್ಲಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಆದರೆ ಇದರ ಹಿಂದೆ ಮಹತ್ತರವಾದ ಗೇಮ್ ಪ್ಲಾನ್ ಇದೆ ಆದ್ದರಿಂದ ಅವರ ಸಹೋದರ ನಾಮಪತ್ರ ಸಲ್ಲಿಸಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ. ರಾಮನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ಡಿ ಕೆ ಸುರೇಶ್ ಕೂಡಲೇ ಕನಕಪುರಕ್ಕೆ ತೆರಳಿದರು.
ತೆರಳುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಾಮಪತ್ರ ಸಲ್ಲಿಸಲು ತಿಳಿಸಿರುವುದರಿಂದ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು. ನಂತರ ಅವರು ನೇರವಾಗಿ ಕನಕಪುರಕ್ಕೆ ತೆರಳಿ ನಾಮಪತ್ರ ಸಲ್ಲಿಸಿದರು.
ಡಿಕೆಶಿಯರ ರಾಜಕೀಯ ಮುಗಿಸಲು ಬಿಜೆಪಿಯಿಂದ ಯತ್ನ – ಡಿ ಕೆ ಸುರೇಶ್
ಡಿ ಕೆ. ಶಿವಕುಮಾರ್ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಸರ್ಕಾರ ಕುತಂತ್ರ ನಡೆಸಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನಾನು ಸಹ ಕನಕಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಕನಕಪುರದಲ್ಲಿ ಇಂದು ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಡಿ.ಕೆ. ಶಿವಕುಮಾರ್ ಅವರ ನಾಮಪತ್ರ ಕ್ರಮಬದ್ಧವಾಗಿದೆ. ಆದರೆ ಕುತಂತ್ರ ನಡೆಸಿ ಅವರ ನಾಮಪತ್ರ ತಿರಸ್ಕೃತ ಆಗಲೂಬಹುದು. ಆ ಮಾಹಿತಿ ಇರುವ ಕಾರಣ ನಾನು ಸಹ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಸುರೇಶ್ ತಿಳಿಸಿದರು.
ಚುನಾವಣಾ ಆಯೋಗದ ಅಧಿಕಾರಿಗಳೂ ಸಹ ಸರ್ಕಾರಿ ಅಧಿಕಾರಿಗಳೇ ಆಗಿದ್ದಾರೆ. ಅವರು ಸರ್ಕಾರದ ಸೂಚನೆಯಂತೆ ಏನು ಬೇಕಾದರೂ ಮಾಡಬಹುದು. ಹೀಗಾಗಿ ನಾವು ಸಹ ಎಚ್ಚರಿಕೆ ಇಟ್ಟಿದ್ದೇವೆ. ಮುಂದಿನ ಬೆಳವಣಿಗೆಗಳನ್ನು ನೀವೇ ಕಾದು ನೋಡಿ ಎಂದರು. ಪದ್ಮನಾಭ ನಗರದಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟನೆ ನೀಡಿದರು.




