45-Year Old Mother Passed PUC Exam: ಮಗಳೊಂದಿಗೆ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾದ ೪೫ ವರ್ಷದ ತಾಯಿ

ಮಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ೪೫ ವರ್ಷದ ತಾಯಿ ಮತ್ತು ಮಗಳು ಒಟ್ಟಿಗೆ ಬರೆದು ಉತ್ತೀರ್ಣರಾಗಿರುವ ಅಪರೂಪದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ನಡೆದಿದೆ.

ಸುಳ್ಯ ಜಯನಗರದ ನಿವಾಸಿ ರಮೇಶ್ ಎಂಬುವವರ ಪತ್ನಿ ಗೀತಾ ಹಾಗೂ ಅವರ ಪುತ್ರಿ ತ್ರಿಶಾ ಒಟ್ಟಿಗೆ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿ ಸಾಧನೆ ಮಾಡಿದವರು. ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಈ ಬೆನ್ನಲೇ ಜಿಲ್ಲೆಯ ತಾಯಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಎದುರಿಸಿ ಉತ್ತೀರ್ಣ ಆಗಿರುವುದು ಸ್ಥಳೀಯರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಸುಳ್ಯದ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿ ಗೀತಾ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣರಾಗಬೇಕು ಎಂದು ಪಣ ತೊಟ್ಟಿದ್ದರು.
ದಿನನಿತ್ಯದ ತಮ್ಮ ಕರ್ತವ್ಯ ಮತ್ತು ಮನೆ ನಿರ್ವಹಣೆ ನಡುವೆಯೂ ಓದು ಮುಂದುವರೆಸಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು ತಮ್ಮ ೪೫ನೇ ವರ್ಷದಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಇನ್ನು ಅವರ ಮಗಳು ತ್ರಿಶಾ ಸುಳ್ಯದ ಜೂನಿಯರ್ ಕಾಲೇಜಿ ನಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ಬರೆದಿದ್ದರು.

೨೫ ವರ್ಷದ ಹಿಂದೆ ಗೀತಾ ಅವರ ಹೈಸ್ಕೂಲ್ ವಿದ್ಯಾಭ್ಯಾಸ ಮೊಟಕುಗೊಂಡಿತ್ತು. ನಂತರ ಎರಡು ವರ್ಷದ ಹಿಂದೆ ಅವರು ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದರು. ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ತಮ್ಮ ಮಗಳು ಓದುವ ಜೂನಿಯರ್ ಕಾಲೇಜಿನಲ್ಲೇ ಬರೆದಿದ್ದರು. ಗೀತಾ ಅವರ ಕಲಿಕೆಗೆ ಪೂರಕವಾಗಿ ಕಾಲೇಜಿನ ಉಪನ್ಯಾಸಕರು ಪುಸ್ತಕಗಳನ್ನು ನೀಡಿ ಸಹಕರಿಸಿ ಪ್ರೋತ್ಸಾಹಿಸಿದ್ದಾರೆ. ಇದೇ ಸಮಯದಲ್ಲಿ ಅವರಿಗೆಲ್ಲ ಗೀತಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

More News

You cannot copy content of this page