ನಿಜ ಜೀವನದಲ್ಲಿ ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ" ಎಂದು ನಟ ದರ್ಶನ್ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.
ಸ್ಯಾಂಡಲ್ ವುಡ್ ನಟ ದರ್ಶನ್ ಈ ಮೊದಲು ತಮ್ಮ ವಿರುದ್ಧ ಸುದ್ದಿಯೊಂದು ಬಿತ್ತರಿಸಿದ ಕಾರಣಕ್ಕೆ ಅವಾಚ್ಯ ಶಬ್ದ ಬಳಸಿ ಸುದ್ದಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ನಟನ ನಡವಳಿಕೆಯಿಂದ ರೋಸಿಹೋದ ವಿದ್ಯುನ್ಮಾನ ಮಾಧ್ಯಮ ಗಳು ನಟನ ವಿರುದ್ಧ ಅಘೋಷಿತ ನಿರ್ಬಂಧ ಹೇರಿದರು. ಅವರ ಕುರಿತ ಯಾವ ಸುದ್ದಿ ಯನ್ನೂ ಪ್ರಕಟಿಸದಿರಲು ನಿರ್ಧರಿತು. ಹೀಗಾಗಿಯೇ ನಟ ದರ್ಶನ್ ತಮ್ಮ ಕ್ರಾಂತಿ ಸಿನಿಮಾ ಪ್ರಚಾರದ ವೇಳೆ ಯೂಟ್ಯೂಬ್ ಚಾನಲ್ ಗೆ ತಾವೇ ತೆರಳಿ ಸಂದರ್ಶನ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು..!
ನನಗೆ ಯಾವ ಸಹಾಯವೂ ಬೇಕಿಲ್ಲ ಎಂದಿದ್ದ ನಟ ದರ್ಶನ್ ಇದೀಗ ಸುದ್ದಿ ಮಾಧ್ಯಮಗಳನ್ನು ಉದ್ದೇಶಿಸಿ ಬರೆದ ಪತ್ರವೊಂದು ಸಂಚಲ ಸೃಷ್ಟಿಸಿದೆ.

ನಟ ದರ್ಶನ್ ಬರೆದರು ಎನ್ನಲಾದ ಪತ್ರದಲ್ಲಿ ಏನಿದೆ..?
ಎಲ್ಲಾ ಮಾಧ್ಯಮ ಮಿತ್ರರಿಗೂ ನಮಸ್ಕಾರ… 75 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಕೆಲವು ವ್ಯಕ್ತಿಗಳು ಮತ್ತು ಕೆಲವು ಹೆಸರುಗಳು ಮಾತ್ರ ಚರಿತ್ರೆಯಲ್ಲಿ ಉಳಿದಿರುತ್ತವೆ. ಆ ಸಾಲಿನಲ್ಲಿ ಡಾ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ದಿನೇಶ್ ಇವರ ಸಮಕಾಲೀನ ದಿಗ್ಗಜರುಗಳನ್ನು ಕರ್ನಾಟಕದ ಜನತೆ ಮೆಚ್ಚಿಕೊಂಡು ಮೆರೆಸಿದರು. ಒಪ್ಪುವ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರೋತ್ಸಾಹಿಸಿರುತ್ತೀರಿ. ಈ ಸಾಲಿನಲ್ಲಿ ಇದ್ದಂತಹ ಕನ್ನಡ ಚಿತ್ರರಂಗ ಮರೆಯಲಾಗದಂತಹ ನಟ ತೂಗುದೀಪ ಶ್ರೀನಿವಾಸ್ ರವರ ಕುಟುಂಬದಿಂದ ಬಂದಂತಹ ಸಣ್ಣ ಕುಡಿ ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಹಲವಾರು ಬಾರಿ ನಾನು ಮಾಡಿರುವ ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ, ನನ್ನ ಪಾತ್ರದಲ್ಲಿರುವ ತಪ್ಪುಗಳನ್ನು ತಿದ್ದಿ ಹೇಳಿರುವಿರಿ. ನಾನು ಸಹ ಮುಂದಿನ ದಿನಗಳಲ್ಲಿ ಮಾಡಿರುವಂತ ಚಿತ್ರಗಳಲ್ಲಿ ನನ್ನ ಪಾತ್ರಗಳಲ್ಲಿ ಬರುವ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿರುವೆನು.
ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಸಹ ಯಾವುದೋ ಒಂದು ಗಳಿಗೆಯಲ್ಲಿ ಕೆಲವು ಅಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ.
ಜೀವನವೆಂಬುದು ಬಹಳ ಅಮೂಲ್ಯ ಹಾಗೂ ತುಂಬಾ ಚಿಕ್ಕದ್ದು, ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ. ನನ್ನ ಈ ಭಾವನೆಯನ್ನು ನನ್ನ ಎಲ್ಲಾ ಮಿತ್ರರು ಹಾಗೂ ಅಭಿಮಾನಿಗಳು ಅರ್ಥ ಮಾಡಿಕೊಂಡು ಗೌರವಿಸಬೇಕು. ಇಂತಿ ನಿಮ್ಮ ದಾಸ, ದರ್ಶನ್ ತೂಗುದೀಪ ಎಂದು ಪತ್ರದಲ್ಲಿ ಬರೆಯಲಾಗಿದೆ.
ಈ ಪತ್ರವನ್ನು ನಟ ದರ್ಶನ್ ಬರೆದಿದ್ದು ಎನ್ನಲಾಗಿದ್ದು, ಎಲ್ಲಾ ಸುದ್ದಿ ಸಂಸ್ಥೆಗಳಿಗೂ ತಲುಪಿಸಿದ್ದಾರೆ. ಆದರೆ ಈ ಪತ್ರದ ಕುರಿತು ಅನುಮಾನ ವ್ಯಕ್ತವಾಗ್ತಿದೆ. ವಿಷಾಧಿಸಿ ಬರೆದ ಪತ್ರದಲ್ಲಿ ಎಂದು ಪತ್ರ ಬರೆಯಲಾಗಿದೆ ಎಂಬುದನ್ನು ಸೂಚಿಸಿ ದಿನಾಂಕ ಬರೆದಿಲ್ಲ. ಅಲ್ಲದೇ, ಸುದ್ದಿ ಸಂಸ್ಥೆ ಗಳಿಗೆ ಹೋದ ಪತ್ರ ನಟನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳದೇ ಇರುವುದು ಇದು ಅಸಲಿಯೋ.. ನಕಲಿಯೋ ಎಂಬ ಪ್ರಶ್ನೆ ಎದುರಾಗಿದೆ. ಅಕ್ಕಸ್ಮಾತ್ ನಟನೇ ಈ ಪತ್ರ ಬರೆದಿದ್ದರೆ, ಇದೊಂದು ಒಳ್ಳೆ ಬೆಳವಣಿಗೆ. ಸಾಮಾಜಿಕ ವಾಗಿ ಗುರುತಿಸಿಕೊಂಡ ವ್ಯಕ್ತಿಗಳು ಹೇಗೆಂದರೆ ಹಾಗೇ ಮಾತಾಡಿದರೆ ಅದು ಅಭಿಮಾನಿಗಳ ಮೇಲೂ ಪರಿಣಾಮ ಬೀರುತ್ತೆ. ಒಂದು ಯುವ ಸಮುದಾಯವನ್ನು ತಪ್ಪು ದಾರಿಗೆ ಎಳೆದ ಕೆಲಸ ನಿಮ್ಮಿಂದಾಗಬಾರದಷ್ಟೇ..




