ನಟ ಸಾಯಿಧರಂ ತೇಜ್ ನನ್ನನ್ನು ಭೇಟಿ ಮಾಡಿ ಫೋನ್ ನಂಬರ್ ಕೊಟ್ಟಿದ್ದಾರೆ, ನನಗೆನೋ ಸಹಾಯ ಮಾಡಿಬಿಟ್ಟಿದ್ದಾರೆ, ಕಾರ್ ಕೊಡಿಸಿದ್ದಾರೆ ಎನ್ನುವುದೆಲ್ಲಾ ಸುಳ್ಳು. ಇಂತಹ ಸುದ್ದಿಗಳಿಂದ ಸಮಸ್ಯೆ ಎದುರಿಸುತ್ತಲೇ ಇದ್ದೀನಿ, ದಯವಿಟ್ಟು ಇಂತಹ ಸುಳ್ಳು ಪ್ರಚಾರ ನಿಲ್ಲಿಸಿ ಎಂದು ನಟ ಸಾಯಿ ಧರಂ ಪ್ರಾಣ ಉಳಿಸಿದ ವ್ಯಕ್ತಿ ಅಬ್ದುಲ್ ಮನವಿ ಮಾಡಿದ್ದಾರೆ.
ಎರಡು ವರ್ಷದ ಹಿಂದಷ್ಟೇ, ತೆಲುಗು ನಟ ಸಾಯಿ ಧರಂ ತೇಜ್ ಸ್ಪೋರ್ಟ್ ಬೈಕ್ ಸ್ಕಿಟ್ ಆದ ಪರಿಣಾಮ ಗಂಭೀರವಾಗಿ ಗಾಯಗೊಂಡ ನಟ ಕೆಲ ದಿನ ಕೋಮಾಗೂ ತೆರಳಿದ್ದರು. ಅಪಘಾತ ವೇಳೆ ಸ್ಥಳದಲ್ಲೇ ಇದ್ದ ಅಬ್ದುಲ್ ಎಂಬುವವರು ನಟನನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆ ಗೆ ದಾಖಲಿಸಿ ಪ್ರಾಣ ಉಳಿಸಿದ್ದರು.
ಈ ಘಟನೆ ನಡೆದು ಎರಡು ವರ್ಷಗಳೇ ಕಳೆದುಬಿಟ್ಟಿದೆ. ಇತ್ತೀಚೆಗೆ ಅಷ್ಟೇ ಈ ಘಟನೆಯನ್ನು ವೇದಿಕೆ ಮೇಲೆ ನೆನೆದ ನಟ ಸಾಯಿಧರಂ ಪ್ರಾಣ ಉಳಿಸಿದವನಿಗೆ ಕೇವಲ ಸಹಾಯ ಅಷ್ಡೇ ಅಲ್ಲ, ನಿಂಗೆ ಏನ್ ಸಮಸ್ಯೆ ಇದ್ರೂ ನಂಗೆ ಹೇಳು ಎಂದು ಮೊಬೈಲ್ ನಂಬರ್ ಕೊಟ್ಟು ಬಂದಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಇನ್ನು ಸಾಯಿ ಧರಂ ಹೇಳಿಕೆ ವೈರಲ್ ಆಗುತ್ತಿದ್ದಂತೆ ಅಬ್ದುಲ್ ಈ ಸುಳ್ಳು ಪ್ರಚಾರವನ್ನು ಇಲ್ಲಿಗೆ ನಿಲ್ಲಿಸಿ ಎಂದು ಮನವಿ ಮಾಡಿದರು.
ನಟನ ಪ್ರಾಣ ಉಳಿಸಿದ್ದಕ್ಕೆ ಕೆಲಸ ಕಳೆದುಕೊಂಡೆ
ಈ ಬಗ್ಗೆ ಖಾಸಗಿ ಚಾನಲ್ ಗೆ ಮಾಹಿತಿ ನೀಡಿದ ಅವರು, ಸಾಯಿಧರಂ ತೇಜ್ ನನ್ನನ್ನು ಭೇಟಿ ಮಾಡಿ ಫೋನ್ ನಂಬರ್ ಕೊಟ್ಟಿದ್ದಾರೆ ಎನ್ನುವುದು ಸುಳ್ಳು. ಸದ್ಯ ಬೇರೆ ಕಡೆ ಕೆಲಸಕ್ಕೆ ಸೇರಿದ್ದೀನಿ. ಆದರೆ ಈಗಲೂ ನನಗೆ ಸಹಾಯ ಸಿಕ್ಕಿದೆ ಎನ್ನುವ ಬಗ್ಗೆ ಏನೇನೋ ಸುದ್ದಿ ಹರಿದಾಡುತ್ತಲೇ ಇದೆ. ಈಗಲೂ ಇಂತಹ ಸುದ್ದಿಗಳಿಂದ ಸಮಸ್ಯೆ ಎದುರಿಸುತ್ತಲೇ ಇದ್ದೀನಿ, ದಯವಿಟ್ಟು ಇಂತಹ ಸುಳ್ಳು ಪ್ರಚಾರ ನಿಲ್ಲಿಸಿ. ನನ್ನನ್ನು ಮೆಗಾ ಫ್ಯಾಮಿಲಿಯ ಯಾರೊಬ್ಬರು ಈವರೆಗೆ ಸಂಪರ್ಕಿಸಿಲ್ಲ. ಅಲ್ಲದೇ ಈ ಘಟನೆಯಿಂದ ನನಗೆ ಸಾಕಷ್ಟು ಸಮಸ್ಯೆ ಎದುರಾಯಿತು, ನನ್ನ ಕೆಲಸ ಹೋಗುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಆ ಘಟನೆ ನಂತರ ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಸುದ್ದಿಗಳು ಹರಿದಾಡಿತ್ತು. ಚಿರಂಜೀವಿ, ರಾಮ್‌ಚರಣ್, ಪವನ್ ಕಲ್ಯಾಣ್ ಅದು ಕೊಟ್ಟರು, ಇದು ಕೊಟ್ಟರು, ಕಾರು, ಬೈಕ್, ಬಂಗ್ಲೇ ಹೀಗೆ ಏನೇನೋ ಸುದ್ದಿ ಬಂತು. ಇದರ ಬೆನ್ನಲ್ಲೇ ನನಗೆ ಟಾರ್ಚರ್ ಶುರುವಾಯಿತು. ಸ್ನೇಹಿತರು, ನೆಂಟರು ಕರೆ ಮಾಡಿ ಏನಪ್ಪಾ ಹೀರೋ ಆಗಬಿಟ್ಟಿದ್ದೀಯಾ? ಮೆಗಾ ಫ್ಯಾಮಿಲಿಯಿಂದ ಅದು ಕೊಟ್ರಂತೆ, ಇದು ಸಿಕ್ತಂತೆ ಅಂತೆಲ್ಲಾ ಕೇಳೋಕೆ ಶುರು ಮಾಡಿದರು. ಕೆಲಸ ಮಾಡುವ ಜಾಗದಲ್ಲೂ ಇದೇ ಚರ್ಚೆ ಆರಂಭವಾಯಿತು. ಎಲ್ಲರೂ ಇದರ ಬಗ್ಗೆಯೇ ಮಾತನಾಡಲು ಶುರು ಮಾಡಿದರು. ಯಾರು ಸಹಾಯ ಮಾಡಿಲ್ಲ ಎಂದರೂ ಕೇಳುತ್ತಿರಲಿಲ್ಲ. ರಿವಾರ್ಡ್ ಸಿಗದಿದ್ದರೂ, ಸಿಕ್ತಾ? ಜಾಕ್‌ಪಾಟ್ ಹೊಡ್ದೆ ಬಿಡು? ಅಂತೆಲ್ಲಾ ಮಾತನಾಡುತ್ತಿದ್ದದ್ದು ಹಿಂಸೆ ಎನಿಸುತ್ತಿತ್ತು ಎಂದು ಅಳಲು ತೋಡಿಕೊಂಡಿದ್ದಾರೆ.




