Krishan Perera: ಸೇಡಿಗಾಗಿ ಡ್ರಗ್ಸ್ ಕೇಸ್ ನಲ್ಲಿ ನಟಿಯನ್ನು ಸಿಲುಕಿಸಿದ ನೆರೆಮನೆಯಾತ..!

ಬಾಲಿವುಡ್ ನಟಿ ಕ್ರಿಸನ್ ಫೆರೇರಾ ಅವರ ಮೇಲಿನ ದ್ವೇಷದ ಕಾರಣಕ್ಕೆ ನೆರೆಮನೆಯಾತ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿ ಶಾರ್ಜಾ ಜೈಲು ಸೇರಿಸಿದ ಪ್ರಕರಣ ನಡೆದಿದೆ.

ಕ್ಷುಲ್ಲಕ ವಿಚಾರಗಳು ತಾರಕಕ್ಕೇರಿ ಏನೆಲ್ಲ ಅನಾಹುತಗಳು ಆಗುತ್ತವೆ ಅನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.
ನಟಿ ಕ್ರಿಸನ್ ಫೆರೇರಾ ಅನ್ಯಾಯವಾಗಿ ಡ್ರಗ್ಸ್ ಪ್ರಕರಣದಲ್ಲಿ ಶಾರ್ಜಾ ಜೈಲು ಸೇರಿದ್ದರು. ತನ್ನದಲ್ಲದ ತಪ್ಪಿಗೆ ಆಕೆ ಹೊರ ದೇಶದಲ್ಲಿ ಸಂಕಷ್ಟ ಎದುರಿಸುವಂತಾಗಿತ್ತು. ಕ್ರಿಸನ್ ತಪ್ಪು ಮಾಡಿಲ್ಲ ಎಂದು ಸಾಬೀತಾಗುತ್ತಿದ್ದಂತೆ ಆಕೆಯನ್ನು ಬಿಡುಗಡೆ ಮಾಡಲಾಗಿದೆ.

ಬಳಿಕ ಮನೆಗೆ ವಿಡಿಯೋ ಕಾಲ್ ಮಾಡಿ ನಟಿ ಕ್ರಿಸನ್ ಫೆರೇರಾ ಮಾತನಾಡಿದ್ದಾರೆ. ಈ ವಿಡಿಯೋವನ್ನು ಆಕೆಯ ಸಹೋದರ ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಡ್ರಗ್ಸ್ ಸಾಗಾಟ ಆರೋಪ ಪ್ರಕರಣದಲ್ಲಿ ಶಾರ್ಜಾ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಕ್ರಿಸನ್ ಫೆರೇರಾ ಅವರನ್ನು ಪೊಲೀಸರು ಬಂಧಿಸಿದ್ದರು. ಆಕೆಯ ತಪ್ಪಿಲ್ಲ. ಬೇಕು ಅಂತಲೇ ಆಕೆಯನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎನ್ನುವ ವಿಚಾರ ಸಾಬೀತಾಗಿದೆ. ಹಾಗಾಗಿ ನಟಿಯನ್ನು ಬಿಡುಗಡೆ ಮಾಡಲಾಗಿದೆ. ನಟಿ ಮನೆಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು ಈ ವೇಳೆ ಮಗಳನ್ನು ನೋಡಿ ತಾಯಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ನಟಿ ಮಾತನಾಡುತ್ತಾ ತನ್ನ ಸಂಕಷ್ಟ ನೆನೆದು ಕಣ್ಣೀರು ಹಾಕಿದ್ದಾರೆ. ‘ಸಡಕ್‌- 2’ ಹಾಗೂ ‘ಬಟ್ಲಾ ಹೌಸ್’ ಸಿನಿಮಾಗಳಲ್ಲಿ ನಟಿಸಿರುವ ಕ್ರಿಸನ್, ಈಗ ಬಿಡುಗಡೆ ಆಗಿದ್ದಾರೆ. ಇನ್ನು 48 ಗಂಟೆಗಳಲ್ಲಿ ಆಕೆ ಭಾರತಕ್ಕೆ ಬರುತ್ತಾರೆ” ಎಂದು ಆಕೆಯ ಸಹೋದರ ಕೆವಿನ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ.

ಏಪ್ರಿಲ್ 1ರಂದು ಶಾರ್ಜಾದಲ್ಲಿ ನಟಿ ಕ್ರಿಸನ್ ಫೆರೇರಾ ಬಂಧನವಾಗಿತ್ತು. ಮುಂಬೈ ಕ್ರೈಂ ಬ್ರಾಂಚ್‌ ಪೊಲೀಸರು ತನಿಖೆ ಮಾಡಿ ಅಸಲಿ ವಿಚಾರ ಬಹಿರಂಗಪಡಿಸಿದ ಮೇಲೆ ಆಕೆಯನ್ನು ಚಾಣಾಕ್ಷತನದಿಂದ ಪ್ರಕರಣದಲ್ಲಿ ಸಿಲುಕಿಸಿದ್ದು ಗೊತ್ತಾಗಿದೆ. ಮುಂಬೈ ಪೊಲೀಸರು ದಾಖಲೆಗಳ ಸಮೇತ ಇದನ್ನು ಶಾರ್ಜಾ ಪೊಲೀಸರಿಗೆ ಮನದಟ್ಟು ಮಾಡಿಸಿ ನಟಿ ಬಿಡುಗಡೆಗೆ ಪ್ರಯತ್ನಿಸಿ‌ ಯಶಸ್ವಿಯಾಗಿದ್ದಾರೆ.

ಕ್ರಿಸನ್ ಫೆರೇರಾ ಡ್ರಗ್ಸ್ ಸಾಗಾಟ ಪ್ರಕರಣ?

ನಟಿ ಕ್ರಿಸನ್ ಫೆರೇರಾ ವಾಸವಾಗಿರುವ ಕಟ್ಟಡದಲ್ಲೇ ಬೇಕರಿ ಮಾಲೀಕ ಆಂಟೋನಿ ಎಂಬಾತನು ವಾಸವಾಗಿದ್ದ. ನಾಯಿಯ ವಿಚಾರಕ್ಕೆ ಆಂಟೋನಿಯ ಸಹೋದರಿ ಹಾಗೂ ನಟಿ ಕ್ರಿಸನ್ ಫೆರೇರಾ ನಡುವೆ ಜಗಳವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆಂಟೋನಿ ಕೂಡ ನಟಿಯ ತಾಯಿ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ನಂತರ ಹೇಗಾದರೂ ಮಾಡಿ ಅವರ ವಿರುದ್ದ ಸೇಡು ತೀರಿಸಿಕೊಳ್ಳಬೇಕು ಎಂದು ಡ್ರಗ್ಸ್‌ ಪ್ರಕರಣದಲ್ಲಿ ನಟಿಯನ್ನು ಸಿಲುಕಿಸುವ ಉಪಾಯ ಮಾಡಿದ್ಧಾನೆ

ಆಂಟೋನಿ, ತನ್ನ ಸ್ನೇಹಿತ ರಾಜೇಶ್ ಬೋಭಟೆ ಎಂಬಾತನ ಸಹಾಯದಿಂದ ನಟಿ ಕ್ರಿಸನ್ ಫೆರೇರಾಳನ್ನು ಶಾರ್ಜಾದಲ್ಲಿ ಆಡಿಷನ್‌ಗಾಗಿ ಕಳುಹಿಸಿದ್ದಾನೆ. ವೆಬ್‌ ಸೀರಿಸ್‌ವೊಂದರ ಆಡಿಷನ್ ಇದೆ, ಅದಕ್ಕಾಗಿ ಈ ಮೊಮೆಂಟೊ ತೆಗೆದುಕೊಂಡು ಹೋಗು, ಇದು ಆಡಿಷನ್ ಪ್ರಾಪ್ ಎಂದು ಹೇಳಿದ್ದಾನೆ. ಆದರೆ ಆ ಮೊಮೆಂಟೊ ಅಡಿಯಲ್ಲಿ ಡ್ರಗ್ಸ್‌ ಇಡಲಾಗಿತ್ತು. ಇನ್ನು ನಟಿಗೆ ಶಾರ್ಟಾ ಫ್ಲೈಟ್‌ ಟಿಕೆಟ್ ಜೊತೆಗೆ ನಕಲಿ ರಿಟರ್ನ್ ಟಿಕೆಟ್ ಕೂಡ ಬುಕ್ ಮಾಡಿದ್ದ. ಇದು ತಿಳಿಯದೇ ಕ್ರಿಸನ್ ಫೆರೇರಾ ಮೊಮೆಂಟೊ ಸಮೇತ ಶಾರ್ಜಾ ವಿಮಾನ ನಿಲ್ದಾಣಕ್ಕೆ ಹೋಗಿ ಇಳಿದಿದ್ಧಾರೆ.
ಆದರೆ ಕ್ರಿಸನ್ ಫೆರೇರಾ ಶಾರ್ಜಾದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ರಾಜೇಶ್ ಅಲ್ಲಿನ ಪೊಲೀಸರಿಗೆ ಫೋನ್ ಮಾಡಿ ನಟಿಯ ಬಳಿ ಡ್ರಗ್ಸ್ ಇರುವುದಾಗಿ ಹೇಳಿದ್ದಾನೆ. ಕೂಡಲೇ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿ ಜೈಲಿಗೆ ಹೋಗುತ್ತಿದ್ದಂತೆ ಆಕೆಯನ್ನು ಬಿಡುಗಡೆ ಮಾಡಿಸಲು ಆರೋಪಿಗಳು ಕುಟುಂಬಸ್ಥರ ಬಳಿ 80 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ. ಇದೇ ಕೆಲವರನ್ನು ಬಲೆಗೆ ಬೀಳಿಸಲು ಆಂಟೋನಿ, ರಾಜೇಶ್ ಪ್ಲ್ಯಾನ್ ಮಾಡಿದ್ದರು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

More News