Sexual Assault Allegation: ಕುಸ್ತಿ ಫೆಡರೇಷನ್ ಮುಖ್ಯಸ್ಥರಿಂದ ಲೈಂಗಿಕ ದೌರ್ಜನ್ಯ ಆರೋಪ: ನ್ಯಾಯ ಸಿಗುತ್ತದೆಯೇ? ಎಂದು ಬೆಂಬಲ ಸೂಚಿಸಿದ ಕ್ರಿಕೆಟ್ ದಿಗ್ಗಜ ಕಪಿಲ್

ಕುಸ್ತಿ ಫೆಡರೇಷನ್ ಆಫ್ ಇಂಡಿಯಾ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ತಮ್ಮ ವಿರುದ್ಧ ನಡೆಯುವ ಅನ್ಯಾಯಕ್ಕೆ ನ್ಯಾಯ ಬೇಕೇ ಬೇಕೆಂದು ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್,‌ ಸೇರಿ ಹಲವಾರು ಕುಸ್ತಿ ಪಟುಗಳು ಕಳೆದ ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನಾ ನಿರತ ಕುಸ್ತಿಪಟುಗಳ ಕುರಿತು ಸರ್ಕಾರ ಮೌನ ವಹಿಸಿದ್ರೆ, ಇತ್ತ ಭಾರತದ ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಬೆಂಬಲ ಸೂಚಿಸಿದ್ದಾರೆ.

ತಮ್ಮ ವಿರುದ್ಧ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ನಿಲ್ಲಿಸಬೇಕೆಂದು ಪ್ರತಿಭಟನಾ ನಿರತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ‌ ಈ ಬಗ್ಗೆ ಸರ್ಕಾರದಿಂದ ಯಾವ ಸಮಜಾಯಿಷಿ ಯೂ ಬಂದಿಲ್ಲ.. ಓರ್ವ ವ್ಯಕ್ತಿಯ ರಕ್ಷಣೆಗೆ ನಿಂತಿದ್ದು, ಇದುವರೆಗೂ ಅವರ ಸಮಸ್ಯೆ ಕೇಳುವ ಪ್ರಯತ್ನ ಮಾಡಿಲ್ಲ. ಪ್ರತಿಭಟನಾ ಕಾರರ ಪ್ರತಿಭಟನೆ ನಿರಂತರವಾಗಿ ಸಾಗುತ್ತಲೇ ಇದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿ ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ಕಪಿಲ್ ದೇವ್ ಅವರು, ಪ್ರತಿಭಟನಾ ನಿರತರ ಫೋಟೋ ಹಂಚಿಕೊಂಡು ನ್ಯಾಯ ಸಿಗುತ್ತದೆಯೇ? ಎಂದು ಬರೆದುಕೊಳ್ಳುವ ಮೂಲಕ ಬೆಂಬಲ ಸೂವಿಸಿದ್ದಾರೆ.

ಇನ್ನು ಇಂದು ಬೆಳಗ್ಗೆ ಅಷ್ಟೇ ಪ್ರತಿಭಟನಾ ನಿರತರ ನಡೆಯನ್ನು ಖಂಡಿಸಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ ಉಷಾ ಹೇಳಿಕೆ ನೀಡಿದ್ದರು. ಪಟುಗಳ ಪ್ರತಿಭಟನೆಯನ್ನು ತೀವ್ರವಾಗಿ ಖಂಡಿಸಿದ ಅವರು, ದೇಶದ ಘನತೆಗೆ ಧಕ್ಕೆ ತರಲು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸೋಸಿಯೇಷನ್ ಬಳಿ ಬರುವುದು ಬಿಟ್ಟು ರಸ್ತೆಗಿಳಿಯುವುದು ಸರಿಯಲ್ಲ ಎಂದು ಹೇಳಿಕೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದರು.

ಇದಕ್ಕೂ ಮೊದಲು ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಪ್ರತಿಭಟನಾ ನಿರತರಿಗೆ ಬೆಂಬಲ ಸೂಚಿಸಿದ್ದರು. ಸಂತ್ರಸ್ತರಿಗೆ ಶೀಘ್ರವಾಗಿ ನ್ಯಾಯ ಒದಗಿಸುವಂತೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಬೇಕು.
ಕುಸ್ತಿಪಟುಗಳು ಬೀದಿಗಿಳಿದಿರುವುದು ದುಃಖದ ಸಂಗತಿ ಎಂದು ಹೇಳುವ ಮೂಲಕ ಬೆಂಬಲ ಸೂಚಿಸಿದ್ದರು.

More News