ವಿಕ್ರಾಂತ್ ರೋಣಾ’ ಸಿನಿಮಾ ಬಳಿಕ ಅನೂಪ್ ಭಂಡಾರಿ ಹಾಗು ನಟ ಸುದೀಪ್ ಮತ್ತೆ ‘ಬಿಲ್ಲ ರಂಗ ಬಾಷಾ’ದಲ್ಲಿ ಒಂದಾಗಿದ್ದಾರೆ.
ಈ ಸಿನಿಮಾ ಕುರಿತು ನಟ ಸುದೀಪ್ ಟ್ವೀಟ್ ಮಾಡಿದ್ದು, ಮೇ 22ರಂದು ಮೊದಲ ಸಿನಿಮಾದ ಪ್ರೊಮೋ ಶೂಟ್ ಹಾಗೂ ಜೂನ್ 1 ರಂದು ಆ ಸಿನಿಮಾವನ್ನು ಲಾಂಚ್ ಮಾಡುವುದಾಗಿ ಬರೆದುಕೊಂಡಿದ್ದಾರೆ.

ಕೆಲವು ವಾರಗಳ ಹಿಂದೆಯಷ್ಟೇ ತಾವು ಮೂರು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿರುವ ಕುರಿತು ನಟ ಸುದೀಪ್ ಬಹಿರಂಗ ಪಡಿಸಿದ್ದರು. ಈ ಮೂರು ಸಿನಿಮಾಗಳಲ್ಲಿ ಮೊದಲು ಯಾವುದು ಪ್ರಾರಂಭವಾಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು.
ಸಿನಿ ಮಾಹಿತಿ ಪ್ರಕಾರ ಮೊದಲು ಸಿನಿಮಾವಾಗಿ ‘ಬಿಲ್ಲ ರಂಗ ಬಾಷಾ’ ಮೂಡಿ ಬರಲಿದೆ. ಈ ಸಿನಿಮಾದ ಪ್ರೊಮೋ ಮೇ 22ರಿಂದ ಶುರುವಾಗಲಿದೆ. ಈ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನವಿದೆ. ವಿಕ್ರಾಂತ್ ರೋಣ ಚಿತ್ರದ ನಂತರ ಕಿಚ್ಚನಿಗಾಗಿ ಸಿನಿಮಾ ಮಾಡುತ್ತಿರುವುದಾಗಿ ಅನೂಪ್ ಭಂಡಾರಿ ಈ ಹಿಂದೆಯೇ ಹೇಳಿಕೊಂಡಿದ್ದರು. ಅವರಿಗಾಗಿಯೇ ಕಥೆ ಬರೆಯುತ್ತಿರುವುದಾಗಿಯೂ ತಿಳಿಸಿದ್ದರು.
ಇನ್ನು ತಮಿಳಿನಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟಿರುವ, ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿರುವ ನಿರ್ದೇಶಕ ಚರಣ್ ಕನ್ನಡಕ್ಕೆ ಬರುತ್ತಿರುವುದಾಗಿ ಸುದ್ದಿ ಆಗಿದೆ. ಅವರು ಸುದೀಪ್ ಗಾಗಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರಂತೆ. ಆದರೆ ಅಧಿಕೃತವಾಗಿ ಈ ವಿಷಯವನ್ನು ಚರಣ್ ಆಗಲಿ ಅಥವಾ ಸುದೀಪ್ ಆಗಲಿ ಹೇಳಿಲ್ಲ. ಆದರೆ, ಗಾಂಧಿನಗರದಲ್ಲಿ ಈ ಸುದ್ದಿ ಭರ್ಜರಿಯಾಗಿ ಸೇಲ್ ಆಗುತ್ತಿದೆ. ಅಲ್ಲದೇ, ನಂದಕಿಶೋರ್ ಕೂಡ ಕಿಚ್ಚನಿಗಾಗಿ ಸಿನಿಮಾವೊಂದನ್ನು ಮಾಡಲಿದ್ದು, ಆ ಕಥೆಯೂ ಲಾಕ್ ಆಗಿದೆ.
ಸದ್ಯ ಸುದೀಪ್ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅವರು ಹೇಳಿದ ಅಭ್ಯರ್ಥಿಗಳ ಪರ ಅವರು ಪ್ರಚಾರ ಮಾಡಲಿದ್ದಾರೆ. ಶಿಗ್ಗಾಂವಿಯಿಂದ ಶುರುವಾದ ಪ್ರಚಾರ ರಾಜ್ಯಾದ್ಯಂತ ಮುಂದುವರೆದಿದೆ. ಚುನಾವಣೆ ನಂತರವೇ ಅವರು ತಮ್ಮ ಸಿನಿಮಾಗಳ ಕಾರ್ಯದಲ್ಲಿ ನಿರತರಾಗಲಿದ್ದಾರೆ.




