Pakistan Flag In Pamphlet: ಕರಪತ್ರದಲ್ಲಿ ಪಾಕಿಸ್ತಾನ ಧ್ವಜ -ಬಿಜೆಪಿ ಅಭ್ಯರ್ಥಿ ಮುನಿರತ್ನ, ಯಾರಬ್ ವಿರುದ್ಧ ಕ್ರಮಕ್ಕೆ ದೂರು

ಬೆಂಗಳೂರು: ಪಾಕಿಸ್ತಾನದ ಧ್ವಜ ಇರುವ ಕರಪತ್ರ ಮುದ್ರಿಸಿ ಅಶಾಂತಿ ನಿರ್ಮಾಣಕ್ಕೆ ಷಡ್ಯಂತ್ರ ರೂಪಿಸಿರುವುದು, ಬಿಜೆಪಿ ರೋಡ್ ಶೋ ನಲ್ಲಿ ಗಲಭೆ ನಡೆಸಲು ಪಿತೂರಿ ನಡೆಸಿರುವ ಶಾಸಕ ಮುನಿರತ್ನ, ಬಿಜೆಪಿ ಪ್ರಾಯೋಜಿತ ಅಭ್ಯರ್ಥಿ ಯಾರಬ್ ವಿರುದ್ಧ ಕಾನೂನಾತ್ಮಕವಾಗಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮ ಎಚ್ ಹಾಗೂ ಸ್ವತಂತ್ರ ಅಭ್ಯರ್ಥಿ ಸುಭಾಶ್ ಯಶವಂತಪುರ ಪೊಲೀಸ್ ಠಾಣೆಗೆ ಪ್ರತ್ಯೇಕವಾಗಿ ದೂರು ದಾಖಲಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸಾರ್ವಜನಿಕ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಯಾರಬ್ ಎಂಬುವವರು ಹಾಲಿ ಶಾಸಕರಾದ ಮುನಿರತ್ನ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಅವರ ಬೆಂಬಲಿಗರಾಗಿ ಕ್ಷೇತ್ರದಾದ್ಯಂತ  ಪರಿಚಿತರಾಗಿದ್ದಾರೆ ಎಂದು ದೂರಿನಲ್ಲಿದೆ.

ಏ.೩೦ ರಂದು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಸಂದರ್ಭದಲ್ಲಿ ನನಗೆ ಯಾರಬ್ ಮುದ್ರಿಸಿರುವ ಕರಪತ್ರದ ಪ್ರತಿಯೊಂದು ದೊರಕಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಭಾವಚಿತ್ರಗಳು ಮತ್ತು ಚಿಹ್ನೆ ಜೊತೆಗೆ ದುರುದ್ದೇಶಪೂರ್ವಕವಾಗಿ ಪಾಕಿಸ್ತಾನದ ಧ್ವಜವನ್ನು ಸೇರಿಸಿದ್ದಾರೆ. ಅಲ್ಲದೆ ಸದರಿ ಕರಪತ್ರದಲ್ಲಿ ಸ್ವಯಂಘೋಷಿತವಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಎಂದು ಘೋಷಿಸಿಕೊಳ್ಳುವ ಜತೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಕುಸುಮ ಎಚ್. ಅವರಿಗೆ ತನ್ನ ಬೆಂಬಲ ನೀಡುತ್ತಿರುವದಾಗಿ ಮುದ್ರಿಸಿದ್ದಾರೆ. ಸಚಿವ ಹಾಗೂ ಕ್ಷೇತ್ರದ ಶಾಸಕ ಮುನಿರತ್ನ , ಬಿಜೆಪಿ ನಾಯಕ ವೇಲು ನಾಯ್ಕರ್ ಸೇರಿದಂತೆ ಮುಂತಾದವರೊಂದಿಗೆ ಇರುವ ಚಿತ್ರಗಳು, ಬಿಜೆಪಿ ಮುಖಂಡರೊಬ್ಬರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ ಫ್ಲಕ್ಸ್ ಡಿಸೈನ್ ಗಳು ಅಭ್ಯವಿದೆ ಎಂದು ದೂರಿನಲ್ಲಿ ಕುಸುಮ ಎಚ್ ಉಲ್ಲೇಖಿಸಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತದಾರರಲ್ಲಿ ಗೊಂದಲ ಮೂಡಿಸಿ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನ ವಿರುದ್ಧ ಕೋಮುಪ್ರಚೋದನೆ ಮೂಡಿಸಲು ಸಲುವಾಗಿ ಶಾಸಕ ಮುನಿರತ್ನ ದುರುದ್ದೇಶಪೂರ್ವಕವಾಗಿ ಯಾರಬ್ ಅವರನ್ನು ಸ್ವತಂತ್ರ ಅಭ್ಯರ್ಥಿಯಾಗಿ  ನಾಮಪತ್ರ ಸಲ್ಲಿಸಲು ಪ್ರೇರಣೆ ನೀಡಿದ್ದಾರೆ. ಅಲ್ಲದೆ ಆತನಿಂದ ಪಾಕಿಸ್ತಾನದ ಧ್ವಜ ಇರುವ ಕರಪತ್ರ ಮುದ್ರಿಸಿ ಚುನಾವಣೆಯಲ್ಲಿ ದಂಗೆ ಎಬ್ಬಿಸುವ ಸಂಚು ರೂಪಿಸಿದ್ದಾರೆ. ಹೀಗಾಗಿ ಪ್ರಚೋದನಕಾರಿ ಕರಪತ್ರ ಮುದ್ರಿಸಿ ಹಂಚಿರುವ ಯಾರಬ್, ಶಾಸಕ ಮುನಿರತ್ನ, ವೇಲು ನಾಯ್ಕರ್ ಸೇರಿದಂತೆ ಮುಂತಾದ ಬಿಜೆಪಿ ನಾಯಕರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಭಾಶ್, ಮೇ ೧ ರಂದು ಬಿಜೆಪಿ ಪಕ್ಷದ ಅಭ್ಯರ್ಥಿ ಮುನಿರತ್ನ ಅವರು, ಚೌಡೇಶ್ವರಿ ವೃತ್ತ ದಿಂದ ಕೃಷ್ಣ ಭವನ್ ಹೋಟೆಲ್ ವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ರೋಡ್ ಶೋವನ್ನು ಮಧ್ಯಾಹ್ನ ೧ ರಿಂದ ೨ ಗಂಟೆ ವರೆಗೆ  ಹಮ್ಮಿಕೊಂಡಿದ್ದಾರೆ. ಆದರೆ‌ ಬಿಜೆಪಿ‌ ಅಭ್ಯರ್ಥಿ ಮುನಿರತ್ನ ತಮ್ಮ ಸಹಚರರಿಗೆ ರೋಡ್ ಶೋ ಸಾಗುವಾಗ ಪಾಕಿಸ್ತಾನದ ಪರ ಘೋಷಣೆ ಕೂಗಿಸಿ ಗಲಭೆ ಸೃಷ್ಟಿಸುವ ಮೂಲಕ ರಾಜ್ಯದಲ್ಲಿ ಶಾಂತಿ ಭಂಗ ಮಾಡುವಂತೆ ಸಂಚು ರೂಪಿಸಿದ್ದಾರೆ‌ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ಈಗಾಗಲೇ ಯಶವಂತಪುರ, ಮತ್ತಿಕೆರೆ, ಜೆಪಿ ಪಾರ್ಕ್, ಬಿಕೆ ನಗರಗಳಲ್ಲಿ ತಮ್ಮ ಬೆಂಬಲಿಗರ ಮೂಲಕ ರೋಡ್ ಶೋ ನಡೆಸಿ ಶಾಂತಿ ಭಂಗಕ್ಕೆ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಮುನಿರತ್ನ ಹಾಗೂ ಅವರ ಬೆಂಬಲಿಗರು ನಡೆಸುತ್ತಿರುವ ಈ ಅಪಾಯಕಾರಿ ಕೃತ್ಯವನ್ನು ತಡೆಗಟ್ಟಲು ಉನ್ನತ ಮಟ್ಟದ ಪೊಲೀಸ್ ತನಿಖೆಗೆ ಒಳಪಡಿಸಬೇಕು ಹಾಗೂ ಭದ್ರತೆ ಹೆಚ್ಚಿಸಬೇಕೆಂದು ಸ್ವತಂತ್ರ ಅಭ್ಯರ್ಥಿ ಸುಭಾಶ್ ದೂರು ಸಲ್ಲಿಸಿದ್ದಾರೆ.

More News