ಬೆಂಗಳೂರು: ‘ಮನಗೂಳಿ ಅವರು ನಮ್ಮನ್ನು ಬಂದು ಭೇಟಿ ಮಾಡಿದ್ದು ನಿಜ. ಈ ವಿಚಾರದಲ್ಲಿ ಸುಳ್ಳು ಹೇಳುವ ಅಗತ್ಯ ನನಗಿಲ್ಲ. ಬೇರೆ ಪಕ್ಷಗಳ ಅಭ್ಯರ್ಥಿಯನ್ನು ಹೈಜಾಕ್ ಮಾಡುವ ಸ್ಥಿತಿ ಕಾಂಗ್ರೆಸ್ ಗೆ ಬಂದಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ನಾವು ಬೇಡ ಎನ್ನುವುದಿಲ್ಲ. ಕುಮಾರಸ್ವಾಮಿ ಅವರು ನೋವಿನಿಂದ ಮಾತನಾಡಿದ್ದು, ಅವರ ಮಾತಿಗೆ ನಾನು ಬೇಸರಿಸುವುದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಸಿಂದಗಿ ಉಪಚುನಾವಣೆಯಲ್ಲಿ ಮನಗೂಳಿ ಅವರ ಪುತ್ರ ಅಶೋಕ್ ಮನಗೂಳಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಚಾರವಾಗಿ ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಗೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ‘ಅಶೋಕ್ ಅವರು ನಮ್ಮ ಅಭ್ಯರ್ಥಿ. ಮನಗೂಳಿ ಅವರು ಬಂದು ನನ್ನನ್ನು ಭೇಟಿ ಮಾಡಿ ಮಾತನಾಡಿದ ವಿಚಾರ ನನಗೆ ಮನಗೂಳಿ ಹಾಗೂ ಅವರ ಪುತ್ರ ಅಶೋಕ್ ಗೆ ಗೊತ್ತಿದೆ ಎಂದುಸ್ಪಷ್ಟಪಡಿಸಿದರು.
ನಾನು ಈ ವಿಚಾರವನ್ನು ಬಹಿರಂಗವಾಗಿ ಹೇಳಿದ್ದು, ಗೌಪ್ಯವಾಗಿ ಹೇಳಿಲ್ಲ. ನಾನು ಮಾತ್ರವಲ್ಲ ಸಿದ್ದರಾಮಯ್ಯನವರು ಕೂಡ ಪ್ರಸ್ತಾಪಿಸಿದ್ದಾರೆ. ನಾವು ಈ ವಿಚಾರದಲ್ಲಿ ಯಾಕೆ ಸುಳ್ಳು ಹೇಳಬೇಕು? ಅದರ ಅಗತ್ಯ ನಮಗೇನಿದೆ? ಬೇಕಿದ್ದರೆ ಅಶೋಕ್ ಮನಗೂಳಿ ಅವರನ್ನೇ ಕೇಳಿ ಎಂದು ಟಿಕೀಸಿದರು.
15 ದಿನಗಳ ಹಿಂದೆ ಭೇಟಿ ಮಾಡಿದ್ದರು ಅಂದರೆ ಕ್ಯಾಲೆಂಡರ್ ತೆಗೆದುಕೊಂಡು ಲೆಕ್ಕಹಾಕಿ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಡಿಕೆಶಿವಕುಮಾರ್, ಅವರು ಸಾಯುವ ಸ್ವಲ್ಪ ದಿನಗಳ ಮೊದಲು ಭೇಟಿ ಮಾಡಿದ್ದರು ಎಂದು ತಿಳಿಸಿದರು.
ತಮ್ಮ ಪಕ್ಷದಲ್ಲಿದ್ದವರು ಕಾಂಗ್ರೆಸ್ ಗೆ ಹೋಗಿದ್ದಾರಲ್ಲ ಎಂಬ ನೋವು ಕುಮಾರಣ್ಣ ಅವರಿಗಿದೆ. ಆ ನೋವಿನಿಂದ ಮಾತನಾಡಿದ್ದಾರೆ. ಅದಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ನಾವು ಯಾರನ್ನೂ ಹೈಜಾಕ್ ಮಾಡುವುದಿಲ್ಲ. ನಮ್ಮಲ್ಲಿ ಸಾಕಷ್ಟು ಮುಖಂಡರಿದ್ದಾರೆ, ನಮ್ಮ ಪಕ್ಷಕ್ಕೆ ಸ್ವ ಇಚ್ಛೆಯಿಂದ ಬರುವವರನ್ನು ನಾವು ಬೇಡ ಎನ್ನುವುದಿಲ್ಲ ಎಂದರು.

ರಾಜಕಾರಣ ಅನ್ನೋದು ನಿಂತ ನೀರಲ್ಲ ಎಂದು ಕುಮಾರಣ್ಣ ಅವರೇ ಹೇಳಿದ್ದಾರೆ. ಕೆಲವರು ಬಿಜೆಪಿಗೆ ಹೋಗಲು ಸಿದ್ಧರಿರುತ್ತಾರೆ. 17 ಜನ ಸಂಸದರು ಗೆದ್ದು, ದೇವೇಗೌಡರು ದೇಶದ ಪ್ರಧಾನಿ ಆದಾಗ, ನಾವು ಅವರನ್ನು ಹೈಜಾಕ್ ಮಾಡಿ ಕರೆದುಕೊಂಡು ಬಂದಿದ್ದೆವಾ? ಒಂದಲ್ಲಾ ಒಂದು ಕಾರಣದಿಂದ ಬರುವವರು ಬರುತ್ತಾರೆ. ಈ ಹಿಂದೆ ಅನೇಕ ನಾಯಕರು ಕೂಡ ಅವರ ಜತೆ ರಾಜಕೀಯ ಭಿನ್ನಾಭಿಪ್ರಾಯದಿಂದ ಕಾಂಗ್ರೆಸ್ ಗೆ ಬಂದಿದ್ದರು. ಅದೇ ರೀತಿ ಮನಗೂಳಿ ಅವರು ಸಾಯುವ ಮುನ್ನ ನನ್ನನ್ನು ಭೇಟಿ ಮಾಡಿದ್ದು ನಿಜ. ಆಗ ಅವರ ಪುತ್ರ ಅಶೋಕ್ ಅವರು ಇದ್ದದ್ದೂ ನಿಜ ಎಂದರು.
ಐಟಿ ದಾಳಿ – ಸಂಪೂರ್ಣ ಮಾಹಿತಿಯಿಲ್ಲದೆ ಪ್ರತಿಕ್ರಿಯೆ ಇಲ್ಲ
ನೀರಾವರಿ ಇಲಾಖೆ ವಿಚಾರವಾಗಿ ಗುತ್ತಿಗೆದಾರರು ಹಾಗೂ ಯಡಿಯೂರಪ್ಪ ಅವರ ಆಪ್ತ ಸಹಾಯಕರ ಮನೆ ಮೇಲೆ ತೆರಿಗೆ ಇಲಾಖೆ ದಾಳಿ ನಡೆದಿದೆ ಎಂದು ಮಾಧ್ಯಮಗಳಲ್ಲಿ ನೋಡಿದೆ. ಇದರ ಹಿಂದೆ ಅನೇಕ ಲೆಕ್ಕಾಚಾರಗಳಿವೆ. ಏಕಾಏಕಿಯಾಗಿ ಇದು ರಾಜಕೀಯ ಪ್ರೇರಿತ ಎಂದು ಹೇಳಲು ನನ್ನ ಬಳಿ ಖಚಿತ ಮಾಹಿತಿ ಇಲ್ಲ ಎಂದು ಉತ್ತರಿಸಿದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಅವರು ಯಾರನ್ನಾದರೂ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂದರೆ ಅದನ್ನು ಮಾಡುತ್ತಾರೆ. ಆತ ಯಡಿಯೂರಪ್ಪ ಅವರ ಆಪ್ತ ಸಹಾಯಕ ಅಲ್ಲ ಎಂದು ಹೇಳಲು ಸಾಧ್ಯವಿಲ್ಲ, ಈ ಹಿಂದೆ ಇದ್ದ ಮಾಜಿ ನೀರಾವರಿ ಮಂತ್ರಿಗಳ ಮೇಲೆ ವಿಚಾರಣೆ ನಡೆಯಲಿದೆ ಎಂಬ ಮಾಹಿತಿ ಬಂದಿದೆ. ಕೆಲವು ಮಂತ್ರಿಗಳು ಕೂಡ ನಮ್ಮ ಮನೆ ಮೇಲೆ ದಾಳಿ ಮಾಡಬೇಡಿ ಎಂದು ದೆಹಲಿಯಲ್ಲಿ ಹೋಗಿ ಮನವಿ ಮಾಡಿದ್ದರು ಎಂಬ ಮಾಹಿತಿನೂ ಇದೆ ಎಂದರು.
ಕೇಸರಿಕರಣಕ್ಕಾಗಿ ಎನ್ಇಪಿ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಕೇಸರಿಕರಣ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಬೇರೆ ರಾಜ್ಯಗಳಲ್ಲಿ ಜಾರಿಯಾಗದ ಶಿಕ್ಷಣ ನೀತಿ ನಮ್ಮ ರಾಜ್ಯದಲ್ಲಿ ಮಾತ್ರ ತರಾತುರಿಯಲ್ಲಿ ಜಾರಿ ಮಾಡುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಈ ಶಿಕ್ಷಣ ನೀತಿ ಜಾರಿಗೆ ತರುವುದೇ ಆದರೆ, ಸಂಸತ್ತಿನಲ್ಲಿ ಯಾಕೆ ಚರ್ಚೆಯಾಗಿಲ್ಲ? ವಿಧಾನಮಂಡಲ ಅಧಿವೇಶನದಲ್ಲಿ ಯಾಕೆ ಚರ್ಚೆಯಾಗಿಲ್ಲ? ಎಂದುಪ್ರಶ್ನಿಸಿದ ಅವರು, ಇದರಲ್ಲಿ ಒಂದೆರಡು ಒಳ್ಳೆಯ ಅಂಶಗಳಿರಬಹುದು, ಆದರೆ ಇದು ಸ್ಪಷ್ಟವಾಗಿ ಕೇಸರಿಕರಣ ಮಾಡುವ ಪ್ರಯತ್ನ ಎಂದು ದೂರಿದರು.
ಇದು ಒಳ್ಳೆಯ ನೀತಿಯಾಗಿದ್ದರೆ ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತಿನಲ್ಲಿ ಜಾರಿಗೊಳಿಸಲು ಹೇಳಿ. ಬೇರೆ ರಾಜ್ಯಗಳಲ್ಲಿ ಮಾಡಲಾಗದ್ದನ್ನು ನಮ್ಮಲ್ಲಿ ಮಾಡಿದ್ದೇನೆ ಎಂದು ಹೈಕಮಾಂಡ್ ಓಲೈಸಲು ಹೊರಟಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಬಿಡುವುದಿಲ್ಲ. ಇದರ ವಿರುದ್ಧ ಚಳವಳಿ, ಆಂದೋಲನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎರಡೂ ಕ್ಷೇತ್ರಗಳಲ್ಲಿ ನಮಗೆ ಉತ್ತಮ ಬೆಂಬಲ
ಸಿಂದಗಿ ಹಾಗೂ ಹಾನಗಲ್ ಉಪ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಪಕ್ಷದ ಪರವಾಗಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಉತ್ಸಾಹ, ಬೆಂಬಲ ಸಿಕ್ಕಿದ್ದು, ಎರಡೂ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ತಿಳಿಸಿದ ಅವರು, ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆವರೆಗೂ ಇದ್ದ ಚುನಾವಣೆ ಪ್ರಚಾರದ ಅವಕಾಶವನ್ನು ರಾತ್ರಿ 7ಗಂಟೆಗೆ ಸೀಮಿತಗೊಳಿಸಿ ಹೊಸ ನಿಯಮ ತಂದಿದ್ದಾರೆ. ನಾವು ನಮ್ಮದೇ ಆದ ತಂತ್ರಗಾರಿಕೆ ಮೂಲಕ ಪ್ರಚಾರ ಮಾಡುತ್ತೇವೆ ಎಂದು ತಿಳಿಸಿದರು.
ರಮೇಶ್ ಆಪ್ತರು ನನ್ನ ಭೇಟಿ ಮಾಡಿದ್ದು ನಿಜ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತರು ನನ್ನನ್ನು ಭೇಟಿ ಮಾಡಿದ್ದರು. ಅನೇಕ ವಿಚಾರ ಚರ್ಚೆ ಮಾಡಿದ್ದಾರೆ. ಅವರ ಸಂದೇಶಗಳನ್ನು ತಿಳಿಸಿದ್ದಾರೆ. ಈ ವಿಚಾರಗಳನ್ನು ನಾನು ಗೌಪ್ಯವಾಗಿಡಬೇಕಾಗಿದೆ. ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.




