ಸ್ಯಾಂಡಲ್ ವುಡ್ ನಟ ಸುದೀಪ್ ಗೆ ಬೆದರಿಕೆ ಪತ್ರ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟನ ಆಪ್ತ ವಯಲದಲ್ಲಿ ಗುರುತಿಸಿಕೊಂಡಿದ್ದ ಆರೋಪಿ ರಮೇಶ್ ಕಿಟ್ಟಿ ಎಂಬುವವರನ್ನು ಸಿಸಿಬಿ ವಶಕ್ಕೆ ಪಡೆದಿದೆ.
ಸುದೀಪ್ ರ ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಪರಿಚಿತರು ನಟ ಸುದೀಪ್ ರನ್ನು ಉದ್ದೇಶಿಸಿ ಪತ್ರ ಬರೆದಿದ್ದು, ಖಾಸಗಿ ವಿಡಿಯೋವನ್ನು ವೈರಲ್ ಮಾಡೋದಾಗಿ ಪತ್ರದಲ್ಲಿ ಧಮ್ಕಿ ಹಾಕಿದ್ದರು.
ಅಲ್ಲದೆ ಪತ್ರದಲ್ಲಿ ನಟ ಸುದೀಪ್‌ಗೆ ಅವಾಚ್ಯ ಶಬ್ದಗಳಲ್ಲಿ ಬೈದು, ನಿಜ ಮುಖ ಬಯಲು ಮಾಡೋದಾಗಿ ಪತ್ರ ಬರೆದಿದ್ದರು. ಈ ಪತ್ರ ಮ್ಯಾನೇಜರ್ ಜಾಕ್ ಮಂಜುಗೆ ಸಿಕ್ಕ ಬೆನ್ನಲ್ಲೇ ಠಾಣೆಗೆ ತೆರಳಿ ದೂರು ನೀಡಿದ್ದರು.
ಜಾಕ್ ಮಂಜು ನೀಡಿದ ದೂರನ್ನು ಆಧರಿಸಿ ಪುಟ್ಟೇನಹಳ್ಳಿ ಪೊಲೀಸರು ಐಪಿಸಿ 504, 506 ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಿಸಿದ್ದು, ಬೆದರಿಕೆ ಪತ್ರದ ಮೂಲ ಹುಡುಕಾಟದಲ್ಲಿದ್ದ ಸಿಸಿಬಿ ಪೊಲೀಸರಿಗೆ ದುಷ್ಕರ್ಮಿಗಳ ಕಾರ್ ನಂಬರ್, ಚಹರೆ ಪತ್ತೆಯಾಗಿತ್ತು. ದೊಮ್ಮಲೂರಿನ ಚೆಕ್ ಪೋಸ್ಟ್ ಬಳಿ ಬಾಕ್ಸ್ ಮೂಲಕ ನಟ ಸುದೀಪ್ ನಿವಾಸಕ್ಕೆ ಪೋಸ್ಟ್ ಮಾಡಿದ್ದರ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಕೊನೆಗೂ ಆರೋಪಿಗಳ ಖೆಡ್ಡ ತೋಡಿದ್ದಾರೆ.
ಸುದೀಪ್ ಆಪ್ತ ಬಣದಲ್ಲೇ ಗುರುತಿಸಿಕೊಂಡಿದ್ದ, ಸುದೀಪ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದ, ನಿರ್ದೇಶಕ ರಮೇಶ್ ಕಿಟ್ಟಿ, ನಟನಿಗೆ ಬೆದರಿಕೆ ಪತ್ರ ಕಳಿಸಿದ್ದರ ಸುಳಿವು ಸಿಕ್ಕ ಬೆನ್ನಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಾರಿಟೇಬಲ್ ಟ್ರಸ್ಟ್ಗೆ ನಿರ್ದೇಶಕ ರಮೇಶ್ ಎರಡು ಕೋಟಿ ಹಣ ಹೂಡಿಕೆ ಮಾಡಿದ್ದರಂತೆ. ಆ ಹಣವನ್ನು ವಾಪಸ್ ಕೇಳಿದಾಗ ಸುದೀಪ್ ಕೊಡಲಿಲ್ಲವಂತೆ. 2 ಕೋಟಿ ರೂಪಾಯಿ ಹಣಕಾಸಿನ ವಿಚಾರದ ಕುರಿತು ಮನಸ್ಥಾಪ ಉಂಟಾಗಿ ಸುದೀಪ್ ನಿಂದ ಕಿರಿಕ್ ಮಾಡಿಕೊಂಡು ದೂರಾಗಿದ್ದು, ಈ ಸಿಟ್ಟಿನಿಂದಾಗಿಯೇ ಅನಾಮದೇಯ ಬೆದರಿಕೆ ಪತ್ರ ಬರೆದ ಬಗ್ಗೆ ಸಿಸಿಬಿ ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟಿದ್ದಾರೆ.
ಇನ್ನು ಬೆದರಿಕೆ ಪ್ರಕರಣದಲ್ಲಿ ಇನ್ನೂ ಕೆಲವರ ಕೈವಾಡ ಇರುವ ಶಂಕೆ ಇದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.




