ದೇಶಾದ್ಯಂತ ಬಿಡುಗಡೆಯಾಗಿರುವ, ನಟಿ ಅದಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ಇರುವ ವಿವಾದಾತ್ಮಕ ಕಥಾಹಂದರವುಳ್ಳ ‘ದಿ ಕೇರಳ ಸ್ಟೋರಿ’ ಗೆ ಜನಮೆಚ್ಚುಗೆ ವ್ಯಕ್ತವಾಗಿದೆ. ಈ ಚಿತ್ರ ಎರಡನೇ ದಿನವೂ ಒಳ್ಳೆಯ ಕಲೆಕ್ಷನ್ ಗಳಿಸಿದೆ.
ಮತಾಂತರ ವಿಚಾರವುಳ್ಳ ‘ ದಿ ಕೇರಳ ಸ್ಟೋರಿ’ ಚಿತ್ರ ಮೇ 5ರಂದು ತೆರೆ ಕಂಡಿತ್ತು. ಈಗಾಗಲೇ ಹಲವು ಕಾರಣಗಳಿಗಾಗಿ ಚರ್ಚೆಯಲ್ಲಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಂಚಲನ ಸೃಷ್ಟಿಸಿದೆ.

ಮೊದಲ ದಿನ ‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ 8 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಎರಡನೇ ದಿನವೂ ಕಲೆಕ್ಷನ್ನಲ್ಲಿ ಗಣನೀಯ ಏರಿಕೆ ಕಂಡಿದೆ. ಇದರಿಂದ ನಿರ್ಮಾಪಕರು ಬಹಳ ಖುಷಿಯಲ್ಲಿದ್ದಾರೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚುತ್ತಿರುವುದರಿಂದ ಅಂತಿಮವಾಗಿ ಈ ಚಿತ್ರದ ಗಳಿಕೆ ಎಷ್ಟಾಗಲಿದೆ ಎಂಬ ಕೌತುಕ ಮೂಡಿದೆ.
ಎರಡನೇ ದಿನವಾದ ಶನಿವಾರ (ಮೇ 6) ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ 12 ಕೋಟಿ ರೂಪಾಯಿ ಗಳಿಸಿದೆ. ಅಲ್ಲಿಗೆ, ಚಿತ್ರದ ಒಟ್ಟು ಕಲೆಕ್ಷನ್ 20 ಕೋಟಿ ರೂಪಾಯಿ ಆಗಿದೆ ಎಂದು ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅವರು ಸೋಶಿಯಲ್ ಮೀಡಿಯಾ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಐಸಿಎಸ್ ಭಯೋತ್ಪಾಕದ ಸಂಘಟನೆಗಳ ಸಂಚಿನಿಂದ ಕೇರಳದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರ ಮತಾಂತರ ಮಾಡಲಾಗುತ್ತಿದೆ ಎಂಬುದನ್ನು ತೋರಿಸಲಾಗಿದೆ. ‘ದಿ ಕೇರಳ ಸ್ಟೋರಿ’ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದದ ಚರ್ಚೆ ಜೋರಾಗಿದೆ.
ಈ ಚಿತ್ರದಲ್ಲಿನ ಕೆಲವು ದೃಶ್ಯಗಳು ವಿವಾದಕ್ಕೆ ಕಾರಣ ಆಗಿವೆ. ವಿಮರ್ಶಕರ ವಲಯದಲ್ಲಿ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ತೋರಿಸಿದ ಅಂಶಗಳು ಸಂಪೂರ್ಣ ಸುಳ್ಳು ಎಂದು ಕೆಲವರು ವಾದಿಸುತ್ತಿದ್ದಾರೆ. ರಾಜಕೀಯದ ಉದ್ದೇಶದಿಂದ ಈ ಸಿನಿಮಾ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿನ ಮುಸ್ಲಿಮರಲ್ಲಿ ಭಯ ಹುಟ್ಟಿಸುವ ಸಲುವಾಗಿ ಈ ಸಿನಿಮಾ ನಿರ್ಮಾಣ ಆಗಿದೆ ಅಂತ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ ‘ದಿ ಕೇರಳ ಸ್ಟೋರಿ’ ಸಿನಿಮಾ ವಿವಾದಕ್ಕೆ ಕಾರಣ ಆಗಿತ್ತು.
ಮತಾಂತರ ಮತ್ತು ಐಸಿಸ್ ಉಗ್ರ ಸಂಘಟನೆಗಳ ನಡುವೆ ಇರುವ ನಂಟನ್ನು ಈ ಸಿನಿಮಾ ತೆರೆದಿಟ್ಟಿದೆ. ಇದು ಸತ್ಯ ಘಟನೆಗಳ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರಕ್ಕೆ ಸುದೀಪ್ತೋ ಸೇನ್ ಅವರ ನಿರ್ದೇಶನವಿದೆ.




