ಮಳೆ..ಮಳೆ.. ಮಳೆ.. ಇನ್ನೂ ಒಂದು ವಾರ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ ಪರಿಣಾಮ ಆಗ್ನೇಯ ಭಾಗ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಚಾ ಚಂಡಮಾರುತ ಉಂಟಾಗಿದೆ.
ಅಲ್ಲದೇ, ಸೈಕ್ಲೋನ್ ಮೋಚಾ ಪರಿಣಾಮದಿಂದ ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ನೀಡಿದೆ.

ಮೇ 9ರ ವೇಳೆಗೆ ಮೋಚಾ ಚಂಡಮಾರುತ ತೀವ್ರ ರೂಪ ಪಡೆಯಲಿದ್ದು, ಸಾರ್ವಜನಿಕರು ಅಗತ್ಯ ಮುಂಜಾಗ್ರತೆ ವಹಿಸಿಕೊಳ್ಳಬೇಕು. ಜೊತೆಗೆ ಒಡಿಶಾ ಕರಾವಳಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಎಚ್ಚರಿಕೆ ರವಾನಿಸಿದೆ.
ಮೇ 8 ರಿಂದ 12ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೀದರ್, ನಿರ್ಣಾ, ಹುಮನಾಬಾದ್, ನಿಂಬರ್ಗಾ ತಾಂಡಾ, ಕೋಲಾರ, ಕಮಲಾಪುರ, ಹಲಬರ್ಗಾ, ತಿಪಟೂರು, ಮಿಡಿಗೇಶಿ, ಕಾಟಿಕೆರೆ, ಹೊಳೆ ಹೊನ್ನೂರು, ಶ್ರೀರಂಗಪಟ್ಟಣದಲ್ಲಿ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ,ಉತ್ತರ ಒಳನಾಡಿನ ರಾಯಚೂರು, ಗದಗ, ಕೊಪ್ಪಳ, ಬಾಗಲಕೋಟೆ, ಬೀದರ್, ಕಲಬುರಗಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.