ರಾಜ್ಯದಲ್ಲಿ ಫೀಲ್ಡ್ ಆಸ್ಪತ್ರೆಗಳ ಸ್ಥಾಪನೆ : ದೂರದೃಷ್ಟಿಯ ನಡೆ ಕೇಂದ್ರ ಆರೋಗ್ಯ ಸಚಿವರ ಮೆಚ್ಚುಗೆ

ಬೆಂಗಳೂರು : ರಾಜ್ಯದಲ್ಲಿನ ಕೋವಿಡ್ 19 ಸೋಂಕಿನ ನಿರ್ವಹಣೆ ಹಾಗೂ ಲಸಿಕೆ ಕಾರ್ಯಕ್ರಮದ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ ಸುಖ್ ಎಲ್. ಮಾಂಡವೀಯ ಅವರು ಮೆಚ್ಚುಗೆ ವ್ಯಕ್ತಪಡಿಸಿ, ಮುಖ್ಯಮಂತ್ರಿಯವರನ್ನು ಅಭಿನಂದಿಸಿದರು.


ಅವರು ನಗರದ ಎಸ್.ಡಿ.ಎಸ್.- ಟಿ.ಆರ್.ಸಿ ಮತ್ತು ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ಆವರಣದಲ್ಲಿ ಸರ್ಕಾರದ ಮತ್ತು ಸಿ.ಎಸ್.ಆರ್. ಅನುದಾನದಡಿಯಲ್ಲಿ ನಿರ್ಮಿಸಲಾಗಿರುವ ಕೋವಿಡ್ ಫೀಲ್ಡ್ ಆಸ್ಪತ್ರೆಯನ್ನು ಉದ್ಘಾಟಿಸಿ, ಮಾತನಾಡಿದ ಅವರು, ರಾಜ್ಯದ ಲಸಿಕೆ ಕಾರ್ಯಕ್ರಮದ ಕುರಿತು ಸಾರ್ವಜನಿಕರಿಂದಲೂ ಮೆಚ್ಚುಗೆ ವ್ಯಕ್ತವಾಗಿರುವ ಕುರಿತು ಅವರು ತಮ್ಮ ಅನುಭವವನ್ನು ಉಲ್ಲೇಖಿಸಿದರು.
ರಾಜ್ಯದಲ್ಲಿ ಶೇ. 83 ರಷ್ಟು ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, ಸೆಪ್ಟೆಂಬರ್ 17ರಂದು ನಡೆಸಿದ ವಿಶೇಷ ಅಭಿಯಾನದಲ್ಲಿ ದೇಶದಲ್ಲಿ ಒಟ್ಟು 2.5 ಕೋಟಿ ಡೋಸ್ ಲಸಿಕೆ ನೀಡಲಾಯಿತು. ಇದರಲ್ಲಿ ಕರ್ನಾಟಕ ರಾಜ್ಯ ಅತಿ ಹೆಚ್ಚು ಲಸಿಕೆ ನೀಡಿ ದಾಖಲೆ ನಿರ್ಮಿಸಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರ ಹಾಗೂ ರಾಜ್ಯದ ಜನತೆಯನ್ನು ಸಚಿವರು ಅಭಿನಂದಿಸಿದರು.


ಕೋವಿಡ್ 19 ಸಾಂಕ್ರಾಮಿಕ ನಿಯಂತ್ರಣದಲ್ಲಿದ್ದರೂ ಇನ್ನೂ ಅಂತ್ಯವಾಗಿಲ್ಲ. ಆದ್ದರಿಂದ ಸರ್ಕಾರಗಳು ಜಾಗರೂಕರಾಗಿರುವುದು ಅತಿ ಮುಖ್ಯ. ಈ ನಿಟ್ಟಿನಲ್ಲಿ ಅಗತ್ಯವಿದ್ದೆಡೆ ಸುಲಭವಾಗಿ ಸ್ಥಳಾಂತರಿಸಬಹುದಾದ ಫೀಲ್ಡ್ ಆಸ್ಪತ್ರೆಗಳನ್ನು ಕರ್ನಾಟಕದಲ್ಲಿ ಸ್ಥಾಪಿಸುತ್ತಿರುವುದು ಒಂದು ದೂರದೃಷ್ಟಿಯ ನಡೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿ ಜಿಲ್ಲೆಯಲ್ಲಿ ಫೀಲ್ಡ್ ಆಸ್ಪತ್ರೆ ಸ್ಥಾಪಿಸಲು ಸರ್ಕಾರ ಸಿದ್ಧವಿದೆ ಎಂದು ನುಡಿದರು.
ಹುಟ್ಟಿದ ಕೂಡಲೇ ಯಾರೂ ದೊಡ್ಡವರಾಗುವುದಿಲ್ಲ. ನಮ್ಮ ಪೋಷಕರು, ಗುರುಗಳು, ನಮ್ಮ ಸಮಾಜ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬೆಳವಣಿಗೆಗೆ ಕೊಡುಗೆ ನೀಡುತ್ತಾರೆ. ನಾವು ಬೆಳೆಯುವುದರೊಂದಿಗೆ ನಮ್ಮ ಸುತ್ತಮುತ್ತಲಿನವರನ್ನೂ ಬೆಳೆಸಬೇಕು. ಸಮಾಜಕ್ಕೆ ನಾವು ಪಡೆದುಕೊಂಡಿರುವುದರಲ್ಲಿ ಕಿಂಚಿತ್ತಾದರೂ ಹಿಂತಿರುಗಿಸಬೇಕು. ಆಗ ಬದುಕಿನ ಬ್ಯಾಲೆನ್ಸ್ ಷೀಟ್ ತಾಳೆಯಾಗುವುದು ಎಂದು ನುಡಿದರು.


ಆರೋಗ್ಯ ಕ್ಷೇತ್ರದಲ್ಲಿ ಸಿ.ಎಸ್.ಆರ್. ಉಪಕ್ರಮಗಳ ಅಧ್ಯಕ್ಷೆಯಾಗಿರುವ ಗೀತಾಂಜಲಿ ಕಿರ್ಲೋಸ್ಕರ್ ಅವರ ಪ್ರಯತ್ನವನ್ನು ಶ್ಲಾಘಿಸಿದ ಮುಖ್ಯಮಂತ್ರಿಯವರು, ಹಿಂದುಳಿದ ಜಿಲ್ಲೆಗಳಲ್ಲಿ ಮತ್ತು ಅಗತ್ಯವಿರುವ ಜಿಲ್ಲೆಗಳಲ್ಲಿ ಇಂತಹ ಫೀಲ್ಡ್ ಆಸ್ಪತ್ರೆ ಸ್ಥಾಪಿಸಲು ಮುಂದಾಗುವಂತೆ ಸಲಹೆ ನೀಡಿದರು. ಇದಕ್ಕೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದ ಪಿ.ಸಿ. ಮೋಹನ್, ಶಾಸಕ ಉದಯ್ ಗರುಡಾಚಾರ್ ಉಪಸ್ಥಿತರಿದ್ದರು.

More News