ಬೆಂಗಳೂರು: ಕೈ ಹೈಕಮಾಂಡ್ ಮುಖ್ಯಮಂತ್ರಿ ಕಸರತ್ತಿಗೆ ಕೊನೆ ಮುದ್ರೆ ಒತ್ತಲು ಸಿದ್ದತೆ ನಡೆಸಿದೆ. ಹೀಗಾಗಿ ಮುಖ್ಯಮಂತ್ರಿ ಆಕಾಂಕ್ಷಿಗಳಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೆ ಏಕಾಂಗಿಯಾಗಿ ಬರುವಂತೆ ಬುಲಾವ್ ನೀಡಿದ್ದು, ಒನ್ ಟು ಒನ್ ಚರ್ಚೆ ಬಳಿಕ ಸಿಎಂ ಯಾರೆಂಬ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. ಇತ್ತ ದೆಹಲಿಗೆ ತೆರಳುವ ಮುನ್ನ ಮಾತನಾಡಿದ ಡಿಕೆ ಶಿವಕುಮಾರ್ ಕಾಂಗ್ರೆಸ್ ನನಗೆ ತಾಯಿ, ದೇವರು ಇದ್ದಂತೆ. ಅವರಿಗೆ ಗೊತ್ತಿದೆ ನನ್ನನ್ನು ಏನು ಮಾಡ್ಬೇಕೆಂದು ಎಂದು ಎಮೋಷನಲೀ ಹೇಳಿಕೆ ನೀಡುವ ಮೂಲಕ ಸಿಎಂ ಬೇಡಿಕೆಯನ್ನು ಇಟ್ಟರು.

ಬೆಂಗಳೂರಿನಲ್ಲಿ ಹೈಕಮಾಂಡ್ ಬಳಿ ಸಿಎಂ ಸ್ಥಾನ ಕೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ಅವರು, ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಪಕ್ಷದ ರಾಷ್ಟ್ರೀಯ ನಾಯಕರು ನನ್ನನ್ನು ಏಕಾಂಗಿಯಾಗಿ ಬರಲು ತಿಳಿಸಿದ್ದು, ಹೀಗಾಗಿ ನಾನು ದೆಹಲಿಗೆ ಹೋಗುತ್ತಿದ್ದೇನೆ’ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ, ನನ್ನ ಪಾಲಿನ ದೇವರು. ಕಾಂಗ್ರೆಸ್ ಪಕ್ಷ ನನ್ನ ಪಾಲಿನ ದೇವಾಲಯ. ಕಾಂಗ್ರೆಸ್ ಪಕ್ಷ, ನನಗೆ ತಾಯಿ ಇದ್ದಂತೆ. ದೇವರು ಮತ್ತು ತಾಯಿಗೆ, ಮಕ್ಕಳಿಗೆ ಏನು ನೀಡಬೇಕು ಎಂಬುದು ಗೊತ್ತಿರುತ್ತದೆ. ನಾನು ನನ್ನ ದೇವರನ್ನು ಭೇಟಿ ಮಾಡಲು ದೇವಾಲಯಕ್ಕೆ ಹೋಗುತ್ತಿದ್ದೇನೆ.ನಾನು ಒಬ್ಬನೇ ಹೋಗುತ್ತಿದ್ದೇನೆ.
ಒಬ್ಬನೇ ಬರುವಂತೆ ಪ್ರಧಾನ ಕಾರ್ಯದರ್ಶಿಯವರು ನನಗೆ ಸೂಚನೆ ಕೊಟ್ಟಿದ್ದಾರೆ.ಹೀಗಾಗಿ ಒಬ್ಬನೇ ಹೋಗುತ್ತಿದ್ದೇನೆ. ನನ್ನ ಆರೋಗ್ಯ ಸುಧಾರಿಸಿದ್ದು, ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ಜನ ನಮಗೆ ನೀಡಿರುವ ಆಶೀರ್ವಾದ, ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಉಳಿಸಿ ಬೆಳೆಸಿಕೊಂಡು ಹೋಗಲು ನಾವು ಶ್ರಮಿಸಬೇಕಿದೆ.
ನಾವು ಕಾನೂನು ಬದ್ಧವಾಗಿ ದೇಶದ ಸಂವಿಧಾನ ಉಳಿಸಲು, ರಾಜ್ಯವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ನಿರ್ಮಿಸಲು ರಾಜ್ಯದ ಜನತೆ ಹಾಗೂ ತಾಯಿ ಚಾಮುಂಡೇಶ್ವರಿ ಅವರ ಆಶೀರ್ವಾದ ಇರಲಿ ಎಂದು ಹೇಳಿ ದೆಹಲಿ ಕಡೆ ಹೊರಟರು.




