Cabinet Ministers Post: ಕ್ಯಾಬಿನೆಟ್ ಜಟಾಪಟಿ: ಸಚಿವ ಸ್ಥಾನ ಬೇಕೆ ಬೇಕೆಂದು ಪಟ್ಟು ಹಿಡಿದ ಕಾಂಗ್ರೆಸ್ ನಾಯಕರು

ಬೆಂಗಳೂರು: ಸಿಎಂ, ಡಿಸಿಎಂ ಕಸರತ್ತು ಮುಗಿದ ಮೇಲೆ ಕ್ಯಾಬಿನೆಟ್ ಜಟಾಪಟಿ ಶುರುವಾಗಿದೆ. ಸಚಿವ ಸ್ಥಾನ ಬೇಕೆಬೇಕೆಂದು 80 ಕ್ಕೂ ಹೆಚ್ಚು ನಾಯಕರಿಂದ ಮಂತ್ರಿಗಿರಿಗಾಗಿ ಲಾಭಿ ಶುರುವಾಗಿದೆ. ಒಂದಷ್ಟು ಮಂದಿ ಸಿಎಂ ಸಿದ್ದರಾಮಯ್ಯ ಮನೆ ಕದ ತಟ್ಟಿದರೆ, ಮತ್ತಷ್ಟು ಮಂದಿ ಡಿಕೆ ಶಿವಕುಮಾರ್ ಬಳಿ ಮಂತ್ರಿಗಿರಿಗಾಗಿ ಪಟ್ಟು ಹಿಡಿದಿದ್ದರೆ, ಮತ್ತಷ್ಟು ಮಂದಿ ದೆಹಲಿಗೆ ತೆರಳಿ ಮಂತ್ರಿ ಸ್ಥಾನಕ್ಕಾಗಿ ಲಾಭಿ ಇಡ್ತಿದ್ದಾರೆ.

ಸಚಿವ ಸಂಪುಟ ನಿರ್ಧಾರ ಹಿನ್ನೆಲೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಆಪ್ತ ಶಾಸಕರು ಭೇಟಿ ನೀಡಿ ಸಚಿವ ಸ್ಥಾನದ ಬೇಡಿಕೆ ಇಟ್ಟರು. ಕೃಷ್ಣಾ ನಿವಾಸಕ್ಕೆ ಭೇಟಿ ನೀಡಿದ ಎಂಎಲ್ ಸಿ ಪ್ರಕಾಶ್ ರಾತೋಡ್ ಸಚಿವ ಸ್ಥಾನ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸಚಿವ ಸ್ಥಾನಕ್ಕೆ ನಾನು ಕೂಡ ಆಕಾಂಕ್ಷಿ ಆಗಿದ್ದೇನೆ. ಎರಡು ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಕಾರ್ಯ ನಿರ್ವಹಿಸಿದ್ದೇನೆ. ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಈ ಸಂಬಂಧ ನಮ್ಮ ಬಂಜಾರ ಸಮುದಾಯದ ಬೇಡಿಕೆ ಕೂಡ ಆಗಿದೆ. ನಮ್ಮ‌ ಸಮುದಾಯಕ್ಕೆ ಅನ್ಯಾಯ ಆಗಲ್ಲ ಎಂಬ ನಂಬಿಕೆ ಇದೆ. ಸಿದ್ದರಾಮಯ್ಯನವರ ಮೇಲೂ ನಂಬಿಕೆ ಇದೆ. ಕಾದು ನೋಡೋಣ ಏನಾಗಲಿದೆ ಎಂದು ಹೇಳಿದರು.

ಸಿದ್ದು ದೆಹಲಿಗೆ ಪ್ರಯಾಣ ಹಿನ್ನೆಲೆ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂ ಕೃಷ್ಣಪ್ಪ ಗಾಂಧಿ ಭವನದ ರಸ್ತೆಯಲ್ಲಿರುವ ಸಿದ್ದು ನಿವಾಸಕ್ಕೆ ಭೇಟಿ ನೀಡಿ ಸಂಪುಟಕ್ಕೆ ಸೇರಿಸಿಕೊಳ್ಳಲು ಮನವಿ ಮಾಡಿದರು. ಕೃಷ್ಣಪ್ಪ ಭೇಟಿ ಬೆನ್ನಲ್ಲೇ ಮಾಜಿ ಸಚಿವೆ ಉಮಾಶ್ರೀ ಕೂಡ ಸಿದ್ದರಾಮಯ್ಯ ರ ಭೇಟಿಗೆ ದೌಡಾಯಿಸಿದರು.

ಇತ್ತ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಮಾಜಿ ಸಚಿವ ಜಯಚಂದ್ರ ನನಗೆ ಈ ಬಾರಿ ಸ್ಪೀಕರ್ ಬೇಡ, ಮಂತ್ರಿ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಬಳಿಕ ಮಾತನಾಡಿದ ಅವರು, ನಾನು ಹಲವಾರು ಬಾರಿ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಯಾವ ಖಾತೆ ಅನ್ನೋದು ಮುಖ್ಯ ಅಲ್ಲ. ಸಚಿವ ಸ್ಥಾನ ಸಿಗುವ ನಿರೀಕ್ಷೆ ಅಷ್ಟೇ ಇದೆ ಎಂದು ತಿಳಿಸಿದರು.

More News