ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುತ್ತಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ -23) ಮೊದಲ ದಿನವಾದ ಶನಿವಾರ ಬೆಂಗಳೂರು ಸೇರಿದಂತೆ ರಾಜ್ಯದಲ್ಲೆಡೆ ಯಾವುದೇ ಅಡೆತಡೆ ಇಲ್ಲದೆ ಯಶಸ್ವಿಯಾಗಿ ನಡೆಯಿತು.
ಬೆಂಗಳೂರಿನ 121 ಕೇಂದ್ರಗಳು ಸೇರಿದಂತೆ ರಾಜ್ಯದ ಎಲ್ಲಾ 592 ಕೇಂದ್ರಗಳಲ್ಲಿ ಪರೀಕ್ಷೆಯು ಪಾರದರ್ಶಕವಾಗಿ ನಡೆದಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.
ಒಟ್ಟು ನೋಂದಾಯಿಸಿದ್ದ 2,61,610 ವಿದ್ಯಾರ್ಥಿಗಳ ಪೈಕಿ ಜೀವಶಾಸ್ತ್ರ ಪರೀಕ್ಷೆಗೆ 2,00,457 (82.53%) ಹಾಗೂ ಗಣಿತ ಪರೀಕ್ಷೆಗೆ 2,39,716 (93.78%) ವಿದ್ಯಾರ್ಥಿಗಳು ಹಾಜರಾಗಿದ್ದರು ಎಂದು ರಮ್ಯಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಹೊಸ ಮುಖ್ಯಮಂತ್ರಿ ಅವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಇದ್ದುದರಿಂದ ಕೆಇಎ ಮುನ್ನೆಚ್ಙರಿಕೆ ಕ್ರಮಗಳನ್ನು ತೆಗೆದುಕೊಂಡಿತ್ತು. ಮುಖ್ಯವಾಗಿ, ವಾಹನ ದಟ್ಟಣೆಯಲ್ಲಿ ಸಿಲುಕಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ತಲುಪುವುದು ತಡವಾಗಬಾರದೆಂದು ಕ್ರಮವಹಿಸಲಾಗಿತ್ತು. ಇದಕ್ಕಾಗಿ, ಬೆಂಗಳೂರಿನ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವವರಿಗೆ ನಿಗದಿತ ಸಮಯಕ್ಕಿಂತ 2 ಗಂಟೆ ಮುಂಚಿತವಾಗಿ ಆಯಾ ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿತ್ತು. ಅಲ್ಲದೇ, ವಿದ್ಯಾರ್ಥಿಗಳಿಗೆ ಕೇಂದ್ರವನ್ನು ತಲುಪಲು ಸಹಾಯ ಮಾಡುವಂತೆ ಪೊಲೀಸರ ಸಹಕಾರವನ್ನು ಕೂಡ ಕೋರಲಾಗಿತ್ತು.
ಭಾನುವಾರ, ಮೇ 21ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಷಯಗಳಿಗೆ ನಿಗದಿಯಾಗಿರುವಂತೆ ಎರಡನೇ ದಿನದ ಪರೀಕ್ಷೆ ನಡೆಯಲಿದೆ.