Siddaramaiah Oath Taking: ಸಿದ್ದರಾಮಯ್ಯ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರಾ? ಯಾವ/ಯಾರು ದೇವರು..? ಎಲ್ಲಿದ್ದಾನೆ/ಳೆ/ರೆ?: ಚೇತನ್ ಪ್ರಶ್ನೆ

ಸದಾ ಹಿಂದೂಪರ ಸಂಘಟನೆ, ಚಿಂತನೆ ವಿರುದ್ಧ ಟೀಕೆ ಮಾಡ್ತಿದ್ದ ನಟ, ಸಾಮಾಜಿಕ ಹೋರಾಟಗಾರ ಚೇತನ್ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದ್ದಾರೆ. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಘಟನೆ ಕಂಡು ಸಾಮಾಜಿಕ ಜಾಲತಾಣದಲ್ಲಿ ಕುಟುಕಿದ್ದಾರೆ.

ನಿನ್ನೆ ಕರ್ನಾಟಕದ ೨೫ ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್  ಪ್ರಮಾಣವಚನ ಸ್ವೀಕರಿಸಿದರು. ನೂತನ ಸಿಎಂಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣ ವಚನ ಬೋಧಿಸಿದರು.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಅದ್ದೂರಿ‌ ವೇದಿಕೆಯಲ್ಲಿ ಸಂವಿಧಾನ ಗೌಪ್ಯತೆ ಪ್ರತಿಜ್ಞೆ ಸ್ವೀಕಾರ ಸಮಾರಂಭದಲ್ಲಿ ಮಧ್ಯಾಹ್ನ ಸರಿಯಾಗಿ 12:30 ಗಂಟೆಗೆ ಕೃತ್ತಿಕಾ ನಕ್ಷತ್ರ, ಅಜಗಂಡ ನಾಮಯೋಗ, ಸಿಂಹಲಗ್ನದಲ್ಲಿ ಸಿದ್ದರಾಮಯ್ಯ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸಿದ್ದರಾಮಯ್ಯ ರ ಈ ನಡೆ ಇದೀಗ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚೇತನ್, ವಿಚಾರವಾದಿ’ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಕರ್ನಾಟಕದ ಸಿಎಂ ಆಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರಾ? ಎಂದು ಪ್ರಶ್ನೆ ಹಾಕಿದರು. ಯಾವ/ಯಾರು ದೇವರು? ದೇವರು ಎಲ್ಲಿದ್ದಾನೆ/ಳೆ/ರೆ? ಇದು ನಿರ್ದಿಷ್ಟವಾದ ಸೈದ್ಧಾಂತಿಕ ಆರಂಭವಲ್ಲ ಎಂದು ಕುಟುಕಿದರು.

ಮುಂದುವರೆದು ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಟೀಕೆ ಮಾಡಿದ ಅವರು, ಶಾಸಕ ಸತೀಶ ಜಾರಕಿಹೊಳಿ ಅವರು ‘ಬುದ್ಧ-ಬಸವ-ಅಂಬೇಡ್ಕರ್’ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷವು ತನ್ನ ಸ್ವ-ಲಾಭದಾಯಕ ರಾಜಕೀಯ ಅಧಿಕಾರಕ್ಕಾಗಿ ನಮ್ಮ ಸಮಾನತೆಯ ಐಕಾನ್‌ಗಳನ್ನು ಯಾವಾಗಲೂ ಹೈಜಾಕ್ ಮಾಡಿದೆ. ಎಸ್ಟಿ ನಾಯಕ ಸಮುದಾಯದ ಸತೀಶ್ ಜಾರಕಿಹೊಳಿ ಶೋಷಿತ ಎಸ್ಟಿಗಳಿಗೆ ಒಳಮೀಸಲಾತಿಯನ್ನು ಬೆಂಬಲಿಸುತ್ತಾರೆಯೇ? ಅಥವಾ ಬುದ್ಧ-ಬಸವ-ಅಂಬೇಡ್ಕರ್ ಕೇವಲ ಗಿಮಿಕ್ ಮಾತ್ರವೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

More News