ಬೆಂಗಳೂರು : ವಿದೇಶದಲ್ಲಿ ಓದಿ ಬೆಳೆದರೂ ತಂದೆಯನ್ನು ಅನುಕರಿಸುತ್ತಿರುವ ಪುತ್ರ, ಅತ್ಯಂತ ಸರಳವಾಗಿ ವಿಧಾನಸೌಧಕ್ಕೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಗಮಿಸಿದರು. ಹೆಗಲ ಮೇಲೆ ಹಸಿರು ಶಾಲು ಧರಿಸಿ ಪಾಂಡವಪುರದಿಂದ ಬೆಂಗಳೂರಿಗೆ ಬಂದು ವಿಧಾನಸೌಧದಲ್ಲಿ ಎತ್ತಿನಗಾಡಿಯಲ್ಲಿ ಪ್ರವೇಶಿಸುವ ಮೂಲಕ ಎಲ್ಲರ ಗಮನ ಸೆಳೆದರು.

ದರ್ಶನ್ ಪುಟ್ಟಣ್ಣಯ್ಯ ಸರಳವಾಗಿ ಉಡುಪುತೊಟ್ಟು ಮೊದಲ ಬಾರಿಗೆ ಇಂದು ಆಡಳಿತ ಸೌಧ ವಿಧಾನಸೌಧಕ್ಕೆ ಪ್ರವೇಶಿಸಿದರು. ಸಾಮಾನ್ಯವಾಗಿ ಶಾಸಕರು ಆಯ್ಕೆಯಾದವರು ವಿಧಾನಸೌಧಕ್ಕೆ ಐಶಾರಾಮಿ ಕಾರುಗಳಲ್ಲಿ ಬರುತ್ತಾರೆ. ಆದರೆ, ದರ್ಶನ್ ಪುಟ್ಟಣ್ಣಯ್ಯ ಮಾತ್ರ ರೈಲಿನಲ್ಲಿ ಆಗಮಿಸಿ ಪ್ರಮಾಣ ವಚನ ಸ್ವೀಕರಿಸಿದರು.
ಮೊದಲ ದಿನ ಎಲ್ಲಾ ಶಾಸಕರ ಫೋಟೋ ಶೂಟ್ ಇರುವ ಹಿನ್ನೆಲೆಯಲ್ಲಿ ಗರಿಗರಿ ಬಟ್ಟೆ ಧರಿಸಿ ಆಗಮಿಸುವ ಇತರ ಶಾಸಕರಿಗೆ ದರ್ಶನ್ ಮಾದರಿಯಾದರು. ಇವರೊಂದಿಗೆ ನವಲಗುಂದ ಶಾಸಕ ಕೋನರೆಡ್ಡಿಯೂ ಕೂಡ ಹಸಿರು ಶಾಲು ಹಾಕಿಕೊಂಡು ಬಂದು ದರ್ಶನ್ ಅವರಿಗೆ ಸಾಥ್ ನೀಡಿದರು.

ದರ್ಶನ್ ಅವರ ತಂದೆ ಕೆ ಎಸ್ ಪುಟ್ಟಣ್ಣಯ್ಯ ಅವರು ರೈತ ಹೋರಾಟಗಾರರು. ರೈತಪರ ಹೋರಾಟಗಳಲ್ಲಿ ಭಾಗಿಯಾದ್ದವರು. ಅವರನ್ನೇ ಅನುಕರಣೆ ಮಾಡುತ್ತಿರುವ ಅವರು ಮುಂಬರುವ ದಿನಗಳಲ್ಲಿ ರೈತರ ಪಾಲಿನ ದಾರಿದೀಪವಾಗುವುದರಲ್ಲಿ ಸಂದೇಹವಿಲ್ಲ.

ಕಳೆದ ಬಾರಿ ಸರ್ವೋದಯ ಪಕ್ಷದಿಂದ ಸೋತ ದರ್ಶನ್ ಅವರು ಈ ಬಾರಿ ಎದುರಾಳಿ ಸಿ ಎಸ್ ಪುಟ್ಟರಾಜು ಅವರನ್ನು ಸೋಲಿಸಿ ವಿಧಾನಸೌಧ ಪ್ರವೇಶಿಸಿದ್ದಾರೆ. ದರ್ಶನ್ ಪುಟ್ಟಣ್ಣ ಅವರಿಗಾಗಿ ಕಾಂಗ್ರೆಸ್ ಪಕ್ಷವು ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರಲಿಲ್ಲ.




