ಅಭಿಮಾನ ಇರೋದು ಒಳ್ಳೆದು. ಆದ್ರೆ ಅದು ಅತಿರೇಕ ಕ್ಕೆ ಹೋದರೆ ಕಂಬಿ ಎಣಿಸಬೇಕಾಗುತ್ತೆ ಅನ್ನೋದಕ್ಕೆ ಕೆಜಿಎಫ್ ನಲ್ಲಿ ನಡೆದ ಘಟನೆಯೇ ಸಾಕ್ಷಿ..
ರಾಜಕೀಯ ನಾಯಕರು, ಸಿನಿಮಾ ತಾರೆಯರು.. ತಮ್ಮ ಪ್ರೀತಿ ಪಾತ್ರರಿಗೆ ಕಟೌಟ್ ರೆಡಿ ಮಾಡಿ ತಮ್ಮದೂ ಒಂದ್ ಫೋಟೋ ಪಕ್ದಲ್ಲಿ ಲಗತ್ತಿಸೋದು ಸಾಮಾನ್ಯ.. ಅದಕ್ಕೂ ಒಂದ್ ಹೆಜ್ಜೆ ಮುಂದೆ ಹೋಗಿ ಹಾಲಿನ ಅಭಿಷೇಕ, ಹೂವು ಹಣ್ಣಿನ ತೋರಣ ಮಾಡಿ ಶೃಂಗಾರ ಮಾಡೋದು ಒಂದ್ ಪಕ್ಷ ಒಕೆ ಅನ್ಬಹುದು.. ಆದ್ರೆ ರಕ್ತದ ಅಭಿಷೇಕ..!
ಹೌದು, ಇತ್ತೀಚೆಗೆ ಅಷ್ಟೇ ತೆಲುಗು ನಟ ಜ್ಯೂನಿಯರ್ ಎನ್.ಟಿ. ಆರ್ 40ನೇ ವಸಂತಕ್ಕೆ ಕಾಲಿಟ್ಟರು.ಈ ವಿಷಯ ತಿಳಿದ ಅಭಿಮಾನಿಗಳು ಪ್ರೀತಿಯ ನಟನಿಗಾಗಿ ಕಟೌಟ್ ರೆಡಿ ಮಾಡಿ, ಹೂವು, ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದ್ದರು. ಇದು ಅಷ್ಟಕ್ಕೆ ನಿಂತಿದ್ರೆ ಈ ವಿಚಾರ ಇನ್ನುವರೆಗೂ ಸುದ್ದಿ ಆಗ್ತಿರ್ಲಿಲ್ಲ.. ಅಂಧ ಪ್ರೇಮ ಕಾನೂನಿನ ಚೌಕಟ್ಟು ಮೀರಿ ಹೋದ ಕಾರಣವೇ ಈ ಸುದ್ದಿ ಸದ್ದು ಮಾಡ್ತಿರೋದು…

ಮೇ 20 ರಂದು ಜ್ಯೂನಿಯರ್ ಎನ್.ಟಿ.ಆರ್ ರ ಹುಟ್ಟು ಹಬ್ಬ ಆಚರಿಸಲು ಕೆಲ ಅಭಿಮಾನಿಗಳು ಕೆಜಿಎಫ್ ಬಳಿಯ ರಾಬರ್ಟ್ ಸನ್ ಪೇಟ್ ಬಳಿ ಇರೋ ಚಿತ್ರ ಮಂದಿರಕ್ಕೆ ಬಂದಿದ್ದಾರೆ. ಹುಟ್ಟು ಹಬ್ಬ ಖುಷಿ ನೆನೆದು ಒಂದ್ ಹೆಜ್ಜೆ ಮುಂದಿಟ್ಟ ಅಂಧರು, ಥಿಯೇಟರ್ ಮುಂದಿದ್ದ ಪೋಸ್ಟರ್ ಮುಂದೆ ಎರಡು ಕುರಿ ತಂದು ಕತ್ತರಿಸಿದ್ದಾರೆ. ಬಳಿಕ ಕುರಿ ಕತ್ತರಿಸಿದ ರಕ್ತದಿಂದ ಪೋಸ್ಟರ್ ಗೆ ಅಭಿಷೇಕ ಮಾಡಿದ್ದಾರೆ..!
ನಾಗಭೂಷಣಂ, ಶಿವನಾಗ ರಾಜು, ಅನಿಲ್ ಕುಮಾರ್, ಶಿವ, ನಾಗೇಶ್ವರ ರಾವ್ ಸೇರಿದಂತೆ 9 ಜನ ಅಭಿಮಾನಿಗಳ ಅವಾಂತರ ಪೊಲೀಸ್ ಠಾಣೆಗೆ ಮುಟ್ತಿದ್ದಂತೆ ಬೆಂಡೆತ್ತಿ ಜೈಲಿಗಟ್ಟಿದ್ದಾರೆ.




