ಬೆಂಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದ ನಯನಾ ಮೋಟಮ್ಮ, ಜೆಡಿಎಸ್ ಅಭ್ಯರ್ಥಿ ಎಂಪಿ ಕುಮಾರಸ್ವಾಮಿ, ಬಿಜೆಪಿ ಪಕ್ಷದ ದೀಪಕ್ ದೊಡ್ಡಯ್ಯ ವಿರುದ್ಧ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದರು.. ಪ್ರತಿಸ್ಪರ್ಧಿಗಳಿಗೆ ಠಕ್ಕರ್ ಕೊಟ್ಟು, ಶಾಸಕಿಯಾಗಿ ವಿಧಾನಸೌದ ಮೆಟ್ಟಿಲು ಹತ್ತುತ್ತಿದ್ದಂತೆ ನಯನಾ ರ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದರಿಂದ ಕಿಂಚಿತ್ತೂ ವಿಚಲಿತರಾಗದ ಶಾಸಕಿ ನಯನಾ ಮೋಟಮ್ಮ ಅವರು ಆ ಖಾಸಗಿ ಫೋಟೋವನ್ನು ತಮ್ಮದೇ ಖಾತೆಯಲ್ಲಿ ಶೇರ್ ಮಾಡಿ, ಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದರು. ಮುಂದುವರೆದು ಬರೆದುಕೊಂಡಿದ್ದ ಅವರು, ಹೌದು… ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು ಎಂದು ಚಾಟಿ ಬೀಸಿದ್ದರು.

ಇನ್ನು ನಯನಾ ಮೋಟಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಗುಡುಗಿದ ಬೆನ್ನಲ್ಲೇ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ನಯನಾ ಪರ ಬ್ಯಾಟ್ ಬೀಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, ಹೊಸದಾಗಿ ಚುನಾಯಿತ ಶಾಸಕಿ ನಯನಾ ಮೋಟಮ್ಮ ಅವರ ಖಾಸಗಿ ಚಿತ್ರಗಳನ್ನು ಪ್ರಕಟಿಸುವ ಮೂಲಕ ರಾಜಕೀಯ ಪ್ರತಿಸ್ಪರ್ಧಿಗಳು ಅವರ ಮರ್ಯಾದೆ ಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿದರು.

ಭಾರತದಲ್ಲಿನ ಎಲ್ಲಾ ಮಹಿಳೆಯರು ವಿವಿಧ ಹಂತಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆಗೆ ಬಲಿಪಶುಗಳಾಗಿದ್ದಾರೆ/ಬಲಿಪಶುಳಾಗುತ್ತಿದ್ದಾರೆ. ಅಧಿಕಾರದ ಉನ್ನತ ಸ್ಥಾನಗಳಿಗೆ ಏರುವ ಮಹಿಳೆಯರು ಅದನ್ನು ಸಾರ್ವಜನಿಕ ರೀತಿಯಲ್ಲಿ ಎದುರಿಸುತ್ತಾರೆ. ದೃಢವಾಗಿ ನಿಂತಿರುವ ಶಾಸಕರಿಗೆ ಅಭಿನಂದನೆಗಳು. ಪೊಲೀಸರು ತಪ್ಪು ಮಾಡಿದವರ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.




