ಬೆಂಗಳೂರು : ಬಿಜೆಪಿ ಸರ್ಕಾರದ ಅಸ್ಥಿತ್ವಕ್ಕೆ ಬಂದು ಎರಡೂವರೆ ವರ್ಷದಲ್ಲಿ ಎರಡನೆ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ವಹಿಸಿಕೊಂಡಿದ್ದರು.ಅವರು ಈಗಾಗಲೇ ಅಧಿಕಾರ ಹಿಡಿದು ಮೂರು ತಿಂಗಳು ಕಳೆಯುತ್ತಿದೆ.ಆದರೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆ ಮಾಡಲು ಸಾಧ್ಯವಾಗಿಲ್ಲ.ಸಂಪುಟ ವಿಸ್ತರಣೆಗೆ ಇನ್ನೂ ಮೂರು-ನಾಲ್ಕು ತಿಂಗಳ ಕಾಲ ದೂಡಿದರೂ ಆಶ್ವರ್ಯವೇನಿಲ್ಲ ಎನ್ನುತ್ತಿವೆ ಬಿಜೆಪಿ ಉನ್ನತ ಮೂಲಗಳು.
ಈಗಾಗಲೇ ಮೂರು ಬಾರಿ ದೆಹಲಿ ಪ್ರವಾಸವನ್ನು ಕೈಗೊಂಡಿರುವ ಸಿಎಂ, ಸಂಪುಟ ವಿಸ್ತರಣೆ ಕಸರತ್ತು ನಡೆಸಿದರೂ,ಹೈಕಮಾಂಡ್ ನಿಂದ ಯಾವುದೇ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಎರಡು ದಿನಗಳ ಹಿಂದೆ ಪಕ್ಷದ ಹೈಕಮಾಂಡ್ ನಡ್ಡಾ ಅವರ ಭೇಟಿಗೆ ಮುಂದಾದ್ರು, ಅವರು ಮಾತ್ರ ಸಿಕ್ಕಿಲ್ಲ ಎಂದು ಸ್ವತ ಮುಖ್ಯಮಂತ್ರಿ ಅವರೇ ತಿಳಿಸಿದ್ದಾರೆ.
ನಾಲ್ಕು ಸ್ಥಾನಗಳ ಭರ್ತಿಗೆ ಅಡ್ಡಿಯಾದ ಬಿಎಸ್ವೈ : ಖಾಲಿ ಇರುವ ನಾಲ್ಕು ಸ್ಥಾನಗಳ ಭರ್ತಿ ಮಾಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಒಮದೆಡೆ ಶಾಸಕರು ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಇವರ ಜತೆಯಲ್ಲಿಯೇ ಸಂಪುಟ ವಿಸ್ತರಣೆಗಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.

ಮುಂದಿನ ಸಂಪುಟ ವಿಸ್ತರಣೆಯಲ್ಲಿ ತಮ್ಮ ಪುತ್ರ ಬಿ ವೈ ವಿಜಯೇಂದ್ರನಿಗೆ ಡಿಸಿಎಂ ಅಥವಾ ಸಚಿವ ಸ್ಥಾನವನ್ನು ಪಡೆದೇ ತೀರಬೇಕೆಂಬ ಮಹದಾಸೆಯೇ, ಖಾಲಿ ಸ್ಥಾನಗಳ ಭರ್ತಿಗೆ ಅಡ್ಡಿಯುಂಟಾಗಿದೆ ಎನ್ನಲಾಗಿದೆ.
ಚಾತಕ ಪಕ್ಷಿಯಂತೆ ಕಾಯುತ್ತಿರುವ 20ಕ್ಕೂ ಹೆಚ್ಚು ಶಾಸಕರು : 20ಕ್ಕೂ ಹೆಚ್ಚು ಶಾಸಕರು ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದು, ಮಂತ್ರಿ ಪದವಿಗಾಗಿ ಹಾತೊರೆಯುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಪಕ್ಷದ ವರಿಷ್ಠರ ಹಸಿರು ನಿಶಾನೆ ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ,ರಾಜೂಗೌಡ,ಪೂರ್ಣಿಮಾ ಶ್ರೀನಿವಾಸ್,ಎಂ.ಪಿ. ಕುಮಾರ ಸ್ವಾಮಿ,ಶಿವನಗೌಡ ನಾಯಕ್,ಶ್ರೀಮಂತ್ ಪಾಟೀಲ್,ಆರ್.ಶಂಕರ್,ಸಿ.ಪಿ.ಯೋಗೀಶ್ವರ್,ಎಸ್.ಎ.ರಾಮದಾಸ್,ಪ್ರೀತಂ ಗೌಡ,ಎಸ್.ಆರ್.ವಿಶ್ವನಾಥ್,ಕುಮಾರ್ ಬಂಗಾರಪ್ಪ,ದತ್ತಾತ್ರೇಯ ಪಾಟೀಲ್ ರೇವೂರ್,ಶಿವರಾಜ್ ಪಾಟೀಲ್,ಗೂಳಿಹಟ್ಟಿ ಶೇಖ ರ್,ಅರವಿಂದ ಬೆಲ್ಲದ್,ನೆಹರು ಓಲೆಕಾರ್,ಹರತಾಳು ಹಾಲಪ್ಪ, ಅರವಿಂದ ಲಿಂಬಾವಳಿ,ಸುರೇಶ್ ಕುಮಾರ್,ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್ ಸೇರಿದಂತೆ ಇನ್ನಿತರ ಅನೇಕ ಶಾಸಕರು ಸಚಿವ ಸ್ಥಾನದ ಕನಸು ಕಾಣುತ್ತಿದ್ದಾರೆ.
ಚುನಾವಣೆಗಳ ನೆಪದಲ್ಲಿ ಸಂಪುಟ ವಿಸ್ತರಣೆಯಿಲ್ಲ: ಮಹಾನಗರ ಪಾಲಿಕೆಗಳ ಚುನಾವಣೆ, ಮಳೆಗಾಲದ ಅಧಿವೇಶನ, ಉಪ ಚುನಾವಣೆ ಸೇರಿದಂತೆ ನಾನಾ ನೆಪಗಳನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಪಕ್ಷದ ಹೈಕಮಾಂಡ್ ಪೂರ್ಣ ಪ್ರಮಾಣದ ಸಂಪುಟ ರಚನೆಗೆ ಒಲವು ವ್ಯಕ್ತಪಡಿಸುತ್ತಿಲ್ಲ. .ಹೀಗಾಗಿ ಮತ್ತೇನಾದರೂ ಸಂಪುಟ ವಿಸ್ತರಣೆ ಎಂಬ ಜೇನು ಗೂಡಿಗೆ ಕೈ ಹಾಕಿದರೆ ಸರ್ಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಆತಂಕ ಮುಖ್ಯಮಂತ್ರಿಗೆ ಕಾಡುತ್ತಿದೆ.

ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಬಿಸಿ : ಈ ನಡುವೆ ಪಕ್ಷದ ವರಿಷ್ಠರ ಸೂಚನೆಯಂತೆ ವಿವಿಧ ನಿಗಮ ಮಂಡಳಿಗಳಿಗೆ ನೇಮಕ ಮಾಡಿರುವ ಅಧ್ಯಕ್ಷರು, ನಿರ್ದೇಶಕರು, ಹಾಗೂ ಪದಾಧಿಕಾರಿಗಳ ಬದಲಾವಣೆಗೆ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ರಚಿಸಿರುವ ಸಮಿತಿ ಆದಷ್ಟು ಶೀಘ್ರದಲ್ಲಿ ವರದಿಯನ್ನು ರಾಜ್ಯ ಉಸ್ತುವಾರಿಗೆ ನೀಡಲಿದೆ.ಉಸ್ತುವಾರಿ ಅರುಣ್ ಸಿಂಗ್ ನಿರ್ದೇಶನ ದಂತೆ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಶಾಸಕರು, ಪಕ್ಷದ ಮುಖಂಡರನ್ನು ಬದಲಿಸಬೇಕೆಂಬ ಸೂಚನೆ ಮುಖ್ಯಮಂತ್ರಿಗೆ ಮತ್ತಷ್ಟು ಪೀಕಲಾಟ ತಂದಿಟ್ಟಿದೆ.
ಈ ಹಿನ್ನೆಲೆಯಲ್ಲಿ ನಿಗಮ ಮಂಡಳಿ ಅಧ್ಯಕ್ಷ ರಾಗಿರುವ ಶಾಸಕರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದೆಂದು ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪ ಕಟ್ಟಪ್ಪಣೆ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ಶಾಸಕರ ನೇಮಕವನ್ನು ಕೈಬಿಟ್ಟರೆ ಅದು ಸರ್ಕಾರಕ್ಕೆ ತಿರುಗು ಬಾಣವಾಗುವ ಆತಂಕವೂ ಮುಖ್ಯಮಂತ್ರಿಗೆ ಕಾಡುತ್ತಿರುವುದರಿಂದ ಶಾಸಕರನ್ನು ಉಳಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷರಾಗಿರುವ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಕೈಬಿಟ್ಟು ಹೊಸಬರಿಗೆ ಆದ್ಯತೆ ನೀಡುವ ಚರ್ಚೆಯೂ ಗಂಭೀರವಾಗಿ ನಡೆಯುತ್ತಿದೆ. ಆದಷ್ಟು ಶೀಘ್ರ ನೇಮಕಾತಿ ಪೂರ್ಣಗೊಳಿಸದಿದ್ದರೆ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಹೊಡೆತ ಬೀಳುವ ಆತಂಕವನ್ನು ಮುಖ್ಯಮಂತ್ರಿ ಹೊಂದಿದ್ದಾರೆ ಎಂಬ ಮಾತುಗಳಿವೆ.
ಇವೆಲ್ಲಕ್ಕಿಂತಲೂ ಹೆಚ್ಚಿನ ಭೀತಿ ಮತ್ತು ಆತಂಕವನ್ನು ತಂದೊಡ್ಡಿರುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಲಿ ಮುಖ್ಯಮಂತ್ರಿಗೆ ಅಡಿಗಡಿಗೆ ಅಡ್ಡಿಯಾಗಿರುವುದು. ಸರ್ಕಾರದ ಪ್ರಮುಖ ತೀರ್ಮಾನಗಳು, ಆದೇಶಗಳು, ನೇಮಕಾತಿಗಳು ಸೇರಿದಂತೆ ಎಲ್ಲವೂ ಮಾಜಿ ಸಿಎಂ ಆದೇಶಕ್ಕೆ ಹೊಂದಾಣಿಕೆ ಅಥವಾ ಸಮಾಧಾನವಾಗುವಂತೆ ನಡೆಸಿದರೆ ಬೊಮ್ಮಾಯಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ತಮ್ಮದೇ ಆದ ರೀತಿ ಕಾರ್ಯ ನಿರ್ವಹಣೆ ಮಾಡಲು ಮುಂದಾದರೆ ಭವಿಷ್ಯದಲ್ಲಿ ಎದುರಾಗಬಹುದಾದ ಸಂಕಷ್ಟಕ್ಕೆ ಅಧಿಕಾರವನ್ನು ಮತ್ತು ಸ್ಥಾನವನ್ನು ಪಣಕ್ಕಿಡಬೇಕಾದ ಸ್ಥಿತಿ ಬಸವರಾಜ್ ಬೊಮ್ಮಾಯಿ ಎದುರಾಗಿದೆ.
ಮುಖ್ಯಮಂತ್ರಿಗೆ ಸಾಥ್ ನೀಡದ ಹಿರಿಯ ಸಚಿವರು, ನಾಯಕರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಸರ್ಕಾರದ ಹಿರಿಯ ಸಚಿವರು, ಶಾಸಕರು ಸರಿಯಾಗಿ ಸಾತ್ ನೀಡುತ್ತಿಲ್ಲವೆಂಬ ಆರೋಪವಿದೆ. ಎಲ್ಲವನ್ನು ಅಳೆದು ತೂಗಿ ನೋಡುವ ಹಾಗೂ ಸಂಶಯದಿಂದಲೇ ಕಾಣುವ ಅತಿ ಬುದ್ದಿವಂತಿಕೆ ಮುಖ್ಯಮಂತ್ರಿ ಪ್ರದರ್ಶಿಸುತ್ತಿರುವುದು ಸಂಪುಟದ ಸಚಿವರು, ಶಾಸಕರ ಅಸಮಾಧಾನವನ್ನು ಮತ್ತಷ್ಟ ಹೆಚ್ಚಿಸುತ್ತಿದೆ.
ಎಲ್ಲರನ್ನೂ ವಿಶ್ವಾಸ ತೆಗೆದುಕೊಳ್ಳಲು ಸಿಎಂ ಸರ್ಕಸ್ ನಡೆಸುತ್ತಿದ್ದು, ಬಹಿರಂಗವಾಗಿ ಮಾತ್ರ ನಾವೆಲ್ಲರೂ ಒಂದೇ ಎಂದು ಹೇಳು ತ್ತಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಅವರಿಗೆ ಸಮಸ್ಯೆಗಳು ಆರಂಭವಾಗಿವೆ ಅಂತಾನೆ ಹೇಳಬಹುದು. ಒಂದೆಡೆ ಅಧಿಕಾರ ಕೊಟ್ಟ ಮಾಜಿ ಮುಖ್ಯಮಂತ್ರಿ, ಮತ್ತೊಂದೆಡೆ ರಾಷ್ಟ್ರೀಯ ನಾಯಕತ್ವ, ರಾಜ್ಯದ ನಾಯಕರು,ಪಕ್ಷ ಮತ್ತೊಂದೆಡೆ ಸರ್ಕಾರ,ಸಚಿವ ಸಂಪುಟ, ರಾಜ್ಯಾಡಳಿತ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವುದು ಅಷ್ಟೇನು ಸುಲಭದ ಮಾತಲ್ಲ. ಏನೇ ವ್ಯತ್ಯಾಸಗಳಾದರೂ ಮಾತು ಕತೆ ಮೂಲಕ ಸರಿಪಡಿಸಿಕೊಂಡು, ಸಮಾಧಾನ ಪಡಿಸಿಕೊಂಡು ಸರ್ಕಾರವನ್ನು ಮುನ್ನಡೆಸಲು ಮುಖ್ಯಮಂತ್ರಿ ಅವರಂತೂ ಶ್ರಮ ಪಡುತ್ತಿರುವುದು ಕಾಣುತ್ತೇವೆ.
ಈ ಎಲ್ಲಾ ಅಸಮಾಧಾನ, ಭಿನ್ನಾಭಿಪ್ರಾಯ, ಹೊಂದಾಣಿಕೆ ಕೊರತೆ, ಸಚಿವರ ಸಂಘರ್ಷಗಳು, ಒಳ ಬೇಗುದಿಗಳು ಎಂದು ಆಸ್ಪೋಟವಾಗಲಿವೆ ಎಂಬುದನ್ನು ಕಾಲವೇ ಉತ್ತರ ನೀಡಲಿದೆ.




