ನವದೆಹಲಿ : ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಂಧಿಯವರು ಹೊಸದಾಗಿ ಪಾಸ್ ಪೋರ್ಟ್ ಪಡೆಯುವ ಉದ್ದೇಶದಿಂದ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮೇ 26 ಕ್ಕೆ ಮುಂದೂಡಿದೆ.
ಇತ್ತೀಚಿನ ದಿನದಲ್ಲಿ ರಾಹುಲ್ ಗಾಂಧಿ ಅವರು ಕ್ರಿಮಿನಲ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರಾಗಿರುವ ಹಿನ್ನೆಲೆಯಲ್ಲಿ ಅವರು ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು. ಈ ಸಂದರ್ಭದಲ್ಲಿ ಅವರು ರಾಜತಾಂತ್ರಿಕ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

ಈ ಹಿನ್ನೆಲೆಯಲ್ಲಿ ಅವರು ಸಾಮಾನ್ಯ ಪಾಸ್ ಪೋರ್ಟ್ ಪಡೆದುಕೊಳ್ಳಲು ನ್ಯಾಯಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಳ್ಳುವ ಉದ್ದೇಶದಿಂದ ನ್ಯಾಯಾಲಯದ ಮೊರೆ ಹೋಗಿದ್ದರು. ನವದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶರು ಈ ಅರ್ಜಿಯ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿದರು.
2015, ಡಿಸೆಂಬರ್ 19ರಂದು ರಾಹುಲ್ ಗಾಂಧಿಯವರು ನ್ಯಾಶನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆದುಕೊಂಡಿದ್ದರು. 2023 ಮಾರ್ಚ್ ತಿಂಗಳಲ್ಲಿ ಅವರ ಸಂಸತ್ ಸದಸ್ಯ ಸ್ಥಾನದಿಂದ ಅವರು ಅನರ್ಹಗೊಂಡಿದ್ದರು.




