ಬೆಂಗಳೂರು: ರಾಜ್ಯ ಶಾಂತಿತೋಟ, ಅದೇ ರೀತಿ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಒಂದು ವೇಳೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಭಜರಂಗದಳ ಮತ್ತು ಆರ್ ಎಸ್ ಎಸ್ ನಂತಹ ಸಂಘಟನೆಗಳು ಮುಂದಾದರೆ ಅವುಗಳನ್ನು ಮುಲಾಜಿಲ್ಲದೆ ನಿಷೇಧಿಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಬಿಜೆಪಿ ನಾಯಕರಿಗೆ ಈ ಕ್ರಮ ಒಪ್ಪಿಕೊಳ್ಳಲು ಸಾಧ್ಯವಾಗದೇ ಇದ್ದರೆ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಎಚ್ಚರಿಕೆ ನೀಡಿದರು. ಇದನ್ನ ನಾವು ಪಕ್ಷದ ಪ್ರಣಾಳಿಕೆಯಲ್ಲಿಯೂ ಭರವಸೆ ನೀಡಿದ್ದೇವು ಎಂದು ತಿಳಿಸಿದರು.
ವಿವಾದಿತ ಮಸೂದೆ ವಾಪಾಸ್ಸು
ಈ ಹಿಂದಿನ ಬಿಜೆಪಿ ಸರ್ಕಾರ ಜಾರಿ ಮಾಡಿದ್ದ ವಿವಾದಿತ ಮಸೂದೆಗಳನ್ನು ಹಿಂಪಡೆಯಲಾಗುವುದು ಎಂದು ಸ್ಪಷ್ಟಪಡಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಹಿಜಾಬ್, ಹಲಾಲ್ ಕಟ್ ಮತ್ತು ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ನಮ್ಮ ಸರ್ಕಾರ ಹಿಂಪಡೆಯಲಿದೆ ಎಂದರು.
ರಾಜ್ಯದಲ್ಲಿ ಪೊಲೀಸರು ಮತ್ತು ಕಾನೂನಿನ ಭಯವಿಲ್ಲದೆ ಕೆಲವು ಸಂಘಟನೆಗಳು ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬಸವಣ್ಣನವರ ತತ್ವಗಳನ್ನು ಕಾಂಗ್ರೆಸ್ ಪಕ್ಷ ಅನುಸರಿಸಿ ಆಡಳಿತ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.




