ರೇಷ್ಮೆ ಬೆಳೆಯುವ ರೈತರ ಹಿತ ಕಾಪಾಡಲು ವಿಶೇಷ ಯೋಜನೆ ಜಾರಿ : ಸಚಿವ ನಾರಾಯಣಗೌಡ

ಬೆಂಗಳೂರು: ರೇಷ್ಮೆ ಬೆಳೆಯುವ ರೈತರನ್ನು ಉಳಿಸಲು ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಲಿದ್ದು, ರೇಷ್ಮೆ ಬೆಳವಣಿಗೆಗೆ ಸರ್ಕಾರದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ನಾರಾಯಣಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಇಂದು ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯರ ಜೊತೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಕೆಸಿ ನಾರಾಯಣಗೌಡ ಅವರು ಸಭೆ ನಡೆಸಿ ಮಾತನಾಡಿದ ಅವರು, ರೇಷ್ಮೆ ಇಲಾಖೆಯಲ್ಲಿ ಮತ್ತಷ್ಟು ಸುಧಾರಣೆ ತರಲು ಎಲ್ಲಾ ರೀತಿಯ ಕ್ರಮಗಳನ್ನ ಕೈಗೊಳ್ಳಲಾಗುವುದು. ಇಲಾಖೆಯಲ್ಲಿ ಆಡಳಿತಾತ್ಮಕ ಚುರುಕು ಮುಟ್ಟಿಸಲು ಖಾಲಿ ಇರುವ ಹುದ್ದೆಗಳನ್ನು ಹಣಕಾಸು ಇಲಾಖೆಯಿಂದ ಅನುಮತಿ ಪಡೆದು ನೇಮಕಕ್ಕೆ ಅಧಿಕಾರಿಗಳಿಗೆ ಸಚಿವ ನಾರಾಯಣ ಗೌಡ ಸೂಚಿಸಿದರು.


ಕರ್ನಾಟಕ ರಾಜ್ಯ ರೇಷ್ಮೆ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಯಾವುದೇ ಕಾರಣಕ್ಕೂ ಗಾಂಧಿ ಕೃಷಿ ವಿಜ್ಞಾನ ಕೇಂದ್ರದೊಂದಿಗೆ ವಿಲೀನ ಇಲ್ಲ. ಸಂಸ್ಥೆಯನ್ನು ತಳಮಟ್ಟದಿಂದ ಅಭಿವೃದ್ಧಿಪಡಿಸಲು ಅಧಿಕಾರಿಗಳು ಶ್ರಮವಹಿಸಬೇಕು ಎಂದು ಸಚಿವ ನಾರಾಯಣಗೌಡ ತಾಕೀತು ಮಾಡಿದರು.
ಬೈವೋಲ್ಟೇನ್ ತಳಿ ಅಭಿವೃದ್ಧಿ, ಖಾಸಗಿ ರೇಷ್ಮೆ ಮಂಡಿ ಬದಲಾಗಿ ಸರ್ಕಾರದ ಮಾರುಕಟ್ಟೆಗೆ ಅಗತ್ಯ ಕ್ರಮವಹಿಸಬೇಕು. ರೇಷ್ಮೆ ಬೆಳೆಗಳಿಗೆ ತಗಲುವ ಕೀಟಬಾಧೆ ನಿವಾರಣೆಗೆ ಸರ್ಕಾರದಿಂದಲೇ ಕೀಟನಾಶಕ ಪೂರೈಸಬೇಕು. ಹಿಪ್ಪು ನೇರಳೆಗೆ ಹನಿ ನೀರಾವರಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಗಳೂರಿನನಲ್ಲಿ ಸಿಲ್ಕ್ ಮ್ಯೂಸಿಯಂ ಸೇರಿದಂತೆ ಹಲವು ಮನವಿಗಳನ್ನ ಕೇಂದ್ರ ಸಿಲ್ಕ್ ಅಸೋಸಿಯೇಷನ್ ವತಿಯಿಂದ ಸಲ್ಲಿಸಲಾಯಿತು. ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾದ ಸದಸ್ಯರ ಬೇಡಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವ ನಾರಾಯಣಗೌಡ ಅವರು, ಶೀಘ್ರದಲ್ಲೇ ಮತ್ತೊಂದು ಸಭೆ ನಡೆಸಿ, ಸುದೀರ್ಘವಾಗಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ, ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಎಸ್.ಆರ್.ಗೌಡ, ಮಾಜಿ ಸಂಸದರಾದ ನಾರಾಯಣಸ್ವಾಮಿ, ನಿವೃತ್ತ ಐಎಎಸ್‌ ಅಧಿಕಾರಿ ಬಾಲಸುಬ್ರಹ್ಮಣ್ಯ ಸೇರಿದಂತೆ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

More News