ಬೆಂಗಳೂರು: ನನ್ನ ಮದ್ವೆ ಆಗು ಪ್ಲೀಸ್. ಎಂದು ಕೇಳಿಕೊಂಡರೂ ಮದ್ವೆ ಆಗಲು ನಿರಾಕರಿಸಿದ ಪ್ರಿಯತಮನ ಮೇಲೆ ಸಿಟ್ಟಿಗೆದ್ದ ಮಹಿಳೆ ಬಿಸಿ ನೀರು ಎರೆಚಿದ ಘಟನೆ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ನಡೆದಿದೆ.
ಕಲಬುರ್ಗಿ ಜಿಲ್ಲೆಯ ವಿಜಯಶಂಕರ ಆರ್ಯ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಖಾಸಗಿಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆಯೇ ಅಪ್ಜಲ್ಪುರ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ ಮೇಲೆ ಪ್ರೇಮವಾಗಿದೆ. ಜ್ಯೋತಿ ಖಾಸಗಿ ಆಸ್ಪತ್ರೆ ಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ನಾಲ್ಕು ವರ್ಷಗಳಿಂದ ಇವರಿಬ್ಬರ ನಡುವೆ ಸಂಬಂಧ ಚನ್ನಾಗಿಯೇ ಇತ್ತು. ಆದರೆ ನರ್ಸ್ ಜ್ಯೋತಿಗೆ ಈಗಾಗಲೇ ಮದುವೆಯಾಗಿ ವಿಚ್ಚೇದನ ಪಡೆದ ಮಾಹಿತಿ ಕಳೆದ ಎರಡು ತಿಂಗಳ ಹಿಂದಷ್ಟೇ ವಿಜಯಶಂಕರ್ ಗೆ ಗೊತ್ತಾಗಿದೆ. ಇದರಿಂದ ಬೇಸತ್ತ ವಿಜಯ್ ಜ್ಯೋತಿ ಯೊಂದಿಗಿನ ಸಂಬಂಧಕ್ಕೆ ತಿಲಾಂಜಲಿ ಹಾಡಿ ಬೇರೊಂದು ಮದ್ವೆ ಆಗಿದ್ದಾನೆ. ವಿಜಯ್ ಮದ್ವೆಯಿಂದ ಸಿಟ್ಟಿಗೆದ್ದ ಜ್ಯೋತಿ ನಿನ್ನೊಂದಿಗೆ ಕೊನೆ ಮಾತು ಆಡಬೇಕೆಂದು ತನ್ನ ಮನೆಗೆ ಕರೆಸಿಕೊಂಡು ಬಿಸಿ ನೀರು ಎರಚಿದ್ದಾಳೆ ಎನ್ನಲಾಗಿದೆ.
ಇನ್ನು ಘಟನೆ ಮೇ 25 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಿಸಿ ನೀರು ಎರಚಿದ ಪರಿಣಾಮ ವಿಜಯ್ ಶಂಕರ್ ನ 30 ರಿಂದ 40 ಭಾಗ ದೇಹ ಸುಟ್ಟಿದ್ದು, ಮಾಹಿತಿ ತಿಳಿದ ಸ್ಥಳೀಯರು ಆತನನ್ನು ವಿಕ್ಟೋರಿಯಾ ಆಸ್ಪತ್ರೆ ಗೆ ದಾಖಲಿಸಿದ್ದು, ವಿಜಯ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಜ್ಯೋತಿ ವಿರುದ್ಧ ಚಾಮರಾಜಪೇಟೆ ಠಾಣೆಗೆ ದೂರು ದಾಖಲಿಸಿದ್ದು, ಖತರ್ನಾಕ್ ಲೇಡಿಯ ಹುಡುಕಾಟದಲ್ಲಿ ಪೊಲೀಸರಿದ್ದಾರೆ.




