WTC Final: ಶುಭ್ಮನ್ ಗಿಲ್ ಮೇಲೆ ಕ್ರಿಕೆಟ್ ಲೋಕದ ಕಣ್ಣು

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಈ ಮಹತ್ವದ ಪಂದ್ಯಕ್ಕಾಗಿ ಎರಡು ತಂಡಗಳು ಭರ್ಜರಿ ತಯಾರಿ ನಡೆಸಿವೆ.

ಇಂಗ್ಲೆಂಡಿನ ಓವಲ್ ಮೈದಾನದಲ್ಲಿ ಜೂ.7ರಿಂದ ಆರಂಭವಾಗಲಿರುವ ಈ ಪಂದ್ಯದಲ್ಲಿ ಉಭಯ ತಂಡಗಳ ಸ್ಟಾರ್ ಆಟಗಾರರ ಜೊತೆಗೆ ಕ್ರಿಕೆಟ್ ಅಭಿಮಾನಿಗಳ ಕಣ್ಣು ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರ ಮೇಲೆ‌ ನೆಟ್ಟಿದೆ. ಪ್ರಸಕ್ತ ವರ್ಷದಲ್ಲಿ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲೂ ಶುಭ್ಮನ್ ಗಿಲ್ ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ. ಹೀಗಾಗಿ ಇಡೀ ಕ್ರಿಕೆಟ್‌ ಜಗತ್ತು ಎದುರು ನೋಡುತ್ತಿರುವ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಓಪನರ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಪ್ರಸಕ್ತ ವರ್ಷದ ಆರಂಭದಿಂದಲೇ ಉತ್ತಮ ಬ್ಯಾಟಿಂಗ್ ಲಯ ಕಂಡುಕೊಂಡಿರುವ ಗಿಲ್, ಮೂರು ಫಾರ್ಮ್ಯಾಟ್ ನಲ್ಲೂ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಅಲ್ಲದೇ ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟೂರ್ನಿಯಲ್ಲೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದ ಗಿಲ್, ಮೂರು ಶತಕಗಳು ಒಳಗೊಂಡಂತೆ 17 ಪಂದ್ಯಗಳಲ್ಲಿ 890 ರನ್‌ಗಳಿಸಿ ಮಿಂಚಿದ್ದರು.

ಇನ್ನೂ ಟೆಸ್ಟ್ ಕ್ರಿಕೆಟ್‌ನಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯ ಪ್ರದರ್ಶಿಸಿರುವ ಯುವ ಓಪನರ್, ಆಡಿರುವ 15 ಟೆಸ್ಟ್ ಪಂದ್ಯಗಳಲ್ಲಿ 34.23ರ ಬ್ಯಾಟಿಂಗ್ ಸರಾಸರಿಯಲ್ಲಿ 890 ರನ್‌ಗಳಿಸಿದ್ದಾರೆ. ತಮ್ಮ ಈ ಅದ್ಭುತ ಪ್ರದರ್ಶನದ ಮೂಲಕವೇ ಇದೇ ವರ್ಷದ ಜನವರಿಯಲ್ಲಿ ಐಸಿಸಿ ತಿಂಗಳ ಆಟಗಾರನಾಗಿ ಗಮನ ಸೆಳೆದಿದ್ದರು. ಈ ಎಲ್ಲಾ ಕಾರಣದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಪ್ರದರ್ಶನ ಹೇಗಿರಲಿದೆ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಇನ್ನೂ ತವರಿನಲ್ಲಿ ಮಾತ್ರವಲ್ಲದೆ ಆಸ್ಟ್ರೇಲಿಯಾ ಅಂಗಳದಲ್ಲಿ ಈಗಾಗಲೇ ಗಮನಾರ್ಹ ಪ್ರದರ್ಶನ ನೀಡಿರುವ ಗಿಲ್, ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿದ್ದಾರೆ. ಆಂಗ್ಲರ ನೆಲದಲ್ಲಿ ಗಿಲ್ ಅವರ ಬ್ಯಾಟಿಂಗ್ ಸ್ಕಿಲ್ ಹೇಗಿರಲಿದೆ ಎಂಬುದು ಸಹ ಕುತೂಹಲ ಕೆರಳಿಸಿದ್ದು, ದಶಕಗಳ ಬಳಿಕ ಐಸಿಸಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿರುವ ಭಾರತಕ್ಕೆ ಶುಭ್ಮನ್ ಗಿಲ್ ಆಸರೆ ಆಗುತ್ತಾರಾ? ಎಂದು ಕಾದು ನೋಡಬೇಕಿದೆ.

More News